ರಾಜೌರಿ (ಜಮ್ಮು ಮತ್ತು ಕಾಶ್ಮೀರ) : ಕಣವೆನಾಡಿನಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯ ಕಂಡಿ ದಟ್ಟಾರಣ್ಯದಲ್ಲಿ ಸೇನೆ ದಾಳಿಗೆ ಭಯೋತ್ಪಾದಕರು ನಡೆಸಿದ ಪ್ರತಿ ದಾಳಿಯಾಗಿ ನಡೆಸಿದ ಬಾಂಬ್ ಸ್ಪೋಟದಲ್ಲಿ ಐವರು ಯೋಧರು ಹುತಾತ್ಮರಾಗಿದ್ದು ಎಂದು ಸೇನೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ : ಕಾಶ್ಮೀರದಲ್ಲಿ 2 ಕಡೆ ಉಗ್ರರಿಂದ ಗ್ರೆನೇಡ್ ದಾಳಿ: ಓರ್ವ ಪೊಲೀಸ್, ನಾಗರಿಕನಿಗೆ ಗಾಯ
ಕಳೆದ ತಿಂಗಳು ರಾಜೌರಿ ಸೆಕ್ಟರ್ನಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದರು. ಈ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಸದೆಬಡಿಯಲು ಗುಪ್ತಚರ ಇಲಾಖೆ ನೀಡುವ ಮಾಹಿತಿ ಆಧಾರಿಸಿ ಸೇನೆ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿತ್ತು. ಮೇ 3 ರಂದು ಸಿಕ್ಕ ಖಚಿತ ಮಾಹಿತಿ ಮೇರೆಗೆ ಉಗ್ರರು ಅಡಗಿರುವ ರಾಜೌರಿ ವಲಯದ ಕಂಡಿ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಇಂದು (ಶುಕ್ರವಾರ) ಬೆಳಗ್ಗೆ 7.30ರ ಸುಮಾರಿಗೆ ಶೋಧ ಕಾರ್ಯದಲ್ಲಿ ತೊಡಗಿದ್ದ ವೇಳೆ ಭಯೋತ್ಪಾದಕರ ತಂಡ ಗುಹೆಯಲ್ಲಿ ಅಡಗಿಕೊಂಡಿರುವುದನ್ನು ಸೇನೆ ಪತ್ತೆ ಮಾಡಿತ್ತು.
ಇದನ್ನೂ ಓದಿ : ಯೋಧರ ಮೇಲೆ ಗ್ರೆನೇಡ್ ದಾಳಿ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಈ ಸಂದರ್ಭದಲ್ಲಿ ಸೇನೆ ಹಾಗೂ ಭಯೋತ್ಪಾದಕರ ನಡುವೆ ಕೆಲಕಾಲ ಗುಂಡಿನ ಚಕಮಕಿ ನಡೆದಿತ್ತು. ಬಳಿಕ ಸೇನೆ ದಾಳಿಗೆ ಪ್ರತಿ ದಾಳಿಯಾಗಿ ಉಗ್ರರು ಸ್ಪೋಟಕ ಎಸೆದಿದ್ದಾರೆ. ಇದರಿಂದಾಗಿ ಇಬ್ಬರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದು, ಮೇಜರ್ ಶ್ರೇಣಿಯ ಒಬ್ಬ ಅಧಿಕಾರಿ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಉಧಂಪುರದ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದ ಮೂವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದಕ್ಕೂ ಹಿಂದೆ ಬುಧವಾರ ಬೆಳಗ್ಗೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಿಚ್ನಾಡ್ ಮಚಿಲ್ ಪ್ರದೇಶದ ಬಳಿ ಇಬ್ಬರು ಉಗ್ರರನ್ನು ಸೇನೆ ಸದೆಬಡಿದಿತ್ತು. ಈ ಘಟನೆ ನಡೆದ ಮರುದಿನ (ಗುರುವಾರ) ಮತ್ತೆ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು. ಮೃತ ಉಗ್ರರನ್ನು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿಗಳಾದ ಶಾಕಿರ್ ಮಜೀದ್ ನಜರ್ ಮತ್ತು ಹನನ್ ಅಹ್ಮದ್ ಸೆಹ್ ಎಂದು ಸೇನೆ ಗುರುತಿಸಿತ್ತು. ಇದೇ ವರ್ಷದ ಮಾರ್ಚ್‌ನಲ್ಲಿ ಇಬ್ಬರೂ ಉಗ್ರಗಾಮಿ ಸಂಘಟನೆಗೆ ಸೇರಿದ್ದರು ಎಂದು ತಿಳಿದು ಬಂದಿದೆ.
ಇನ್ನು ಕಾರ್ಯಾಚರಣೆ ನಡೆಸುತ್ತಿರುವ ಸ್ಥಳಕ್ಕೆ ಸೇನೆಯ ಮತ್ತಷ್ಟು ಪಡೆಯನ್ನು ರವಾನಿಸಿದ್ದು, ಇದರ ಪರಿಣಾಮ ಅಲ್ಲಿನ ಪ್ರದೇಶದ ಜನರ ಮೇಲೆ ಬೀರದಂತೆ ಮುನ್ನಚ್ಚರಿಕೆ ವಹಿಸಿ, ರಜೌರಿ ವಯಲದಲ್ಲಿ ಸಂಪೂರ್ಣ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಮ್ಮು ಎಡಿಜಿಪಿ ಮುಖೇಶ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಗ್ರೆನೇಡ್ ದಾಳಿಯಲ್ಲಿ ಐವರು ಯೋಧರು ಹುತಾತ್ಮ: ಉಗ್ರರ ಬೇಟೆಗೆ ಕಾರ್ಯಾಚರಣೆ