ಕಾಂಚೀಪುರಂ: ಸಾಂಬಾರ್ ಫ್ರೀ ಕೊಡದ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ರೆಸ್ಟೋರೆಂಟ್‌ಗೆ ದಂಡ ವಿಧಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ದಕ್ಷಿಣ ಭಾರತದ ಊಟೋಪಹಾರದಲ್ಲಿ ಸಾಂಬಾರ್ ಜನಪ್ರಿಯ. ಮಿಶ್ರ ತರಕಾರಿಗಳು, ಹುಣಸೆಹಣ್ಣು, ಮಸಾಲೆ ಪದಾರ್ಥಗಳು ಮತ್ತು ಖಾರದ ಪುಡಿ ಹಾಕಿ ರುಚಿ-ರುಚಿಯಾದ ಸಾಂಬಾರ್ ಸಿದ್ಧಪಡಿಸಲಾಗುತ್ತದೆ.
ಇಲ್ಲಿನ ಕಲೆಕ್ಟರೇಟ್ ಕಚೇರಿ ಎದುರಿನ ರೆಸ್ಟೋರೆಂಟ್‌ಗೆ ಬಂದಿದ್ದ ಪೊಲೀಸ್ ಸಬ್ಇನ್ಸ್ಪೆಕ್ಟರ್ ರಾಜಮಾಣಿಕ್ಕಂ ಉಚಿತ ಸಾಂಬಾರ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ಹಣ ಪಾವತಿಸಬೇಕಾಗುತ್ತೆ ಎಂದಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿದೆ. ಈ ಬೆಳವಣಿಗೆಯ ಬಳಿಕ ಕೋಪಗೊಂಡ ಪೊಲೀಸ್ ಆಫೀಸರ್ ಅಲ್ಲಿಂದ ತೆರಳಿದ್ದರು.
ಶನಿವಾರ ಮತ್ತೆ ಅದೇ ರೆಸ್ಟೋರೆಂಟ್‌ಗೆ ಬಂದ ರಾಜಮಾಣಿಕ್ಕಂ, 'ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದೀರಾ, ಎಂದು ತಿಳಿಸಿ ಮಾಲೀಕರಿಗೆ 5,000 ರೂ. ದಂಡ ಹಾಕಿದ್ದಾರೆ. ಈ ಘಟನೆ ಕುರಿತು ರೆಸ್ಟೋರೆಂಟ್ ಮಾಲೀಕ ಎಸ್ಪಿಗೆ ದೂರು ನೀಡಿದ್ದಾರೆ.