ಬೆಂಗಳೂರು/ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಮಿಚೌಂಗ್ ಚಂಡಮಾರುತದ ಪ್ರಭಾವ ತೀವ್ರಗೊಂಡಿದೆ. ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಇದರಿಂದ ರೈಲು, ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕರ್ನಾಟಕದಿಂದ ಹೊರಡುವ 10 ಕ್ಕೂ ಅಧಿಕ ರೈಲುಗಳನ್ನು ನಿಲ್ಲಿಸಲಾಗಿದೆ.
ತಮಿಳುನಾಡಿನಲ್ಲಿ ಬಹುತೇಕ ರೈಲ್ವೇ ನಿಲ್ದಾಣಗಳು ಮಳೆಯಿಂದ ಜಲಾವೃತವಾಗಿವೆ. ಕೆಲವೆಡೆ ಗುಡ್ಡ ಕುಸಿತ ಉಂಟಾಗಿ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಚೆನ್ನೈನ ಡಾ. ಎಂ.ಜಿ. ಆರ್ ಸೆಂಟ್ರಲ್‌ನಿಂದ ಹೊರಡುವ 6 ರೈಲುಗಳನ್ನು ದಕ್ಷಿಣ ರೈಲ್ವೆ ವಿಭಾಗ ರದ್ದುಗೊಳಿಸಲಾಗಿದೆ.
70 ವಿಮಾನಗಳ ಹಾರಾಟ ಬಂದ್: ಚೆನ್ನೈ ವಿಮಾನ ನಿಲ್ದಾಣದಿಂದ ಇಂದು ಹೊರಡಬೇಕಿದ್ದ ಎಲ್ಲ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಸುಮಾರು 70 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ರನ್‌ವೇ ಮತ್ತು ಟಾರ್‌ಮ್ಯಾಕ್‌ಗಳು ಜಲಾವೃತವಾಗಿವೆ. ಇದರಿಂದ ಅಹಮದಾಬಾದ್, ತಿರುವನಂತಪುರಂ, ದುಬೈ, ಶ್ರೀಲಂಕಾ ಸೇರಿದಂತೆ ಹಲವಾರು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ.
ವಿಮಾನಗಳು ಬೆಂಗಳೂರಿಗೆ ಡೈವರ್ಟ್: ಭಾರಿ ಮಳೆಯಿಂದ ಚೆನ್ನೈ ಏರ್ಪೋರ್ಟ್ನಲ್ಲಿ ತಾತ್ಕಾಲಿಕವಾಗಿ ವಿಮಾನ ಆಗಮನ ಕಾರ್ಯಾಚರಣೆ ರದ್ದು ಮಾಡಲಾಗಿದೆ. ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಡೈವರ್ಟ್ ಮಾಡಲಾಗಿದೆ.
ಕಳೆದ ರಾತ್ರಿಯಿಂದ ಈವರೆಗೂ 27 ವಿಮಾನಗಳು ಬೆಂಗಳೂರಿನತ್ತ ಡೈವರ್ಟ್ ಆಗಿವೆ. ಎಮಿರೇಟ್ಸ್, ಲೂಪ್ತಾನ್ಸ್, ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇರಿದಂತೆ 27 ವಿಮಾನಗಳು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಇದರಿಂದ ಮುಂಜಾನೆಯಿಂದಲೇ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ಬಂದ ಪ್ರಯಾಣಿಕರು ಏರ್ಪೋರ್ಟ್ನಲ್ಲಿ ಕಾಯುತ್ತಿದ್ದಾರೆ. ಮಳೆ ಕಡಿಮೆಯಾದರೆ ಚೆನ್ನೈಗೆ ತೆರಳಲು ಕಾಯುತ್ತಿದ್ದಾರೆ.
ಕರ್ನಾಟಕದಿಂದಲೂ ರೈಲು ಸಂಚಾರ ರದ್ದು: ತಮಿಳುನಾಡಿನಲ್ಲಿ ಭೀಕರ ಮಳೆಯಾಗುತ್ತಿರುವ ಕಾರಣ ಕರ್ನಾಟಕದಿಂದ ಅಲ್ಲಿಗೆ ತೆರಳಬೇಕಿದ್ದ 10 ಕ್ಕೂ ಅಧಿಕ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಭಾರಿ ಮಳೆ ನೀರು ಬಹುತೇಕ ರೈಲ್ವೇ ನಿಲ್ದಾಣಗಳಲ್ಲಿ ನುಗ್ಗಿದೆ. ಕೆಲವೆಡೆ ಗುಡ್ಡ ಕುಸಿತವೂ ಉಂಟಾಗಿದೆ. ಹೀಗಾಗಿ ತಮಿಳುನಾಡು ಭಾಗಕ್ಕೆ ಇಂದು ರೈಲ್ವೇ ಸೇವೆ ಇರುವುದಿಲ್ಲ. ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೇ ಇಲಾಖೆ ಮನವಿ ಮಾಡಿದೆ.
ಯಾವೆಲ್ಲಾ ರೈಲು ಸೇವೆ ರದ್ದು
- ರೈಲಿನ ಸಂಖ್ಯೆ:12007, ಡಾ. ಎಂಜಿಆರ್ ಚೆನ್ನೈ-ಮೈಸೂರು
- ರೈಲಿನ ಸಂಖ್ಯೆ:12008, ಮೈಸೂರು- ಡಾ. ಎಂಜಿಆರ್ ರೈಲ್ವೇ ನಿಲ್ದಾಣ (ಸೆಂಟ್ರಲ್)
- ರೈಲಿನ ಸಂಖ್ಯೆ: 22625, ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆ. ಎಸ್.ಆರ್ ಬೆಂಗಳೂರು
- ರೈಲಿನ ಸಂಖ್ಯೆ: 22626, ಕೆ.ಎಸ್.ಆರ್ ಬೆಂಗಳೂರು - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್
- ರೈಲಿನ ಸಂಖ್ಯೆ: 12639, ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆ.ಎಸ್.ಆರ್ ಬೆಂಗಳೂರು
- ರೈಲಿನ ಸಂಖ್ಯೆ: 12640, ಕೆ.ಎಸ್.ಆರ್ ಬೆಂಗಳೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್
- ರೈಲಿನ ಸಂಖ್ಯೆ:12027, ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆ.ಎಸ್.ಆರ್ ಬೆಂಗಳೂರು
- ರೈಲಿನ ಸಂಖ್ಯೆ:12028, ಕೆ.ಎಸ್.ಆರ್ ಬೆಂಗಳೂರು - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್
- ರೈಲಿನ ಸಂಖ್ಯೆ:12608, ಕೆ.ಎಸ್.ಆರ್ ಬೆಂಗಳೂರು - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್
- ರೈಲಿನ ಸಂಖ್ಯೆ:12609, ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ; ರಾಜ್ಯದಲ್ಲಿ ಎರಡು ದಿನ ಮಳೆ ಸಾಧ್ಯತೆ