ಮಹಾರಾಷ್ಟ್ರ: ''ಪುಣೆ ಜಿಲ್ಲೆಯ ಭೀಮಾಂಶಕರ ಜ್ಯೋತಿರ್ಲಿಂಗ ನಿಜವಲ್ಲ'' ಎಂದು ಅಸ್ಸೋಂ ಸರ್ಕಾರವು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಈ ಕುರಿತು ಭೀಮಾಶಂಕರ ದೇವಸ್ಥಾನದ ಅರ್ಚಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಹೌದು, ಮಹಾರಾಷ್ಟ್ರದ ಪುಣ್ಯಕ್ಷೇತ್ರ ಭೀಮಾಶಂಕರವು ಪುಣೆ ಜಿಲ್ಲೆಯ ಅಂಬೇಗಾಂವ್ ತಾಲೂಕಿನಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಭೀಮಾಶಂಕರ ಕೂಡಾ ಒಂದು. ಆದರೆ, ಈಗ ಈ ಜ್ಯೋತಿರ್ಲಿಂಗಕ್ಕೆ ಹೊಸ ವಿವಾದ ಸುತ್ತಿಕೊಂಡಿದೆ.
ಭೀಮಾ ನದಿ ದಡದಲ್ಲಿರುವ ಜ್ಯೋತಿರ್ಲಿಂಗ: ''ಪುಣೆಯಲ್ಲಿರುವ ಜ್ಯೋತಿರ್ಲಿಂಗವು ಪುಣೆ ಜಿಲ್ಲೆಯಲ್ಲಿಲ್ಲ. ಅದು ಅಸ್ಸೋಂನಲ್ಲಿದೆ'' ಎಂದು ಅಸ್ಸೋಂ ಸರ್ಕಾರ ಹೇಳಿಕೊಂಡಿದೆ. ಹೀಗಾಗಿ ಈ ಕ್ಷೇತ್ರದ ಬಗ್ಗೆ ವಿವಾದ ಹುಟ್ಟಿಕೊಂಡಿದೆ. ''ಭೀಮಾ ನದಿಯ ದಡದಲ್ಲಿರುವ ಜ್ಯೋತಿರ್ಲಿಂಗವನ್ನು ಹಿಂದಿನಿಂದಲೂ ಭೀಮಾಶಂಕರ ಎಂದು ಕರೆಯಲಾಗುತ್ತಿತ್ತು. ಅಸ್ಸೋಂ ಸರ್ಕಾರ ಹೇಳುವುದನ್ನು ಯಾರೂ ನಂಬಬಾರದು'' ಎಂದು ಭೀಮಾಶಂಕರ ದೇವಸ್ಥಾನದ ಪ್ರಧಾನ ಅರ್ಚಕ ಮಧುಕರಶಾಸ್ತ್ರಿ ಗಾವಂಡೆ ಎಚ್ಚರಿಸಿದ್ದಾರೆ.
ದೇಶದಲ್ಲಿವೆ 12 ಜ್ಯೋತಿರ್ಲಿಂಗಗಳು: ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಮೂರು ಜ್ಯೋತಿರ್ಲಿಂಗಗಳು ಮಹಾರಾಷ್ಟ್ರದಲ್ಲಿವೆ. ಅವುಗಳಲ್ಲಿ ಒಂದು ಪುಣೆಯಲ್ಲಿರುವ ಭೀಮಾಶಂಕರ, ದೇಶದ ಎಲ್ಲೆಡೆಯಿಂದ ಶಿವಭಕ್ತರು ಶಂಕರನ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಇದು 12 ಜ್ಯೋತಿರ್ಲಿಂಗಗಳಲ್ಲಿ ಆರನೆಯ ಜ್ಯೋತಿರ್ಲಿಂಗವಾಗಿದೆ. ಆದರೆ, ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಹಾರಾಷ್ಟ್ರದಿಂದ ತೀರ್ಥಕ್ಷೇತ್ರವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ದೊಡ್ಡ ವಿವಾದವೇ ಸೃಷ್ಟಿ: ಮಹಾರಾಷ್ಟ್ರದಲ್ಲಿರುವ ಭೀಮಾಶಂಕರ ಜ್ಯೋತಿರ್ಲಿಂಗ ನಿಜವಲ್ಲ ಎಂದು ಅಸ್ಸಾಂ ಸರ್ಕಾರ ಪ್ರತಿಪಾದಿಸಲು ಹೊರಟಿಗೆ. ಆರನೇ ಜ್ಯೋತಿರ್ಲಿಂಗ ಅಸ್ಸಾಂನಲ್ಲಿದೆ ಎಂದು ಅಸ್ಸಾಂ ಸರ್ಕಾರ ಹೇಳಿಕೊಂಡಿದೆ. ಇದೀಗ ಬಿಜೆಪಿ ಆಡಳಿತದ ಅಸ್ಸೋಂ ಸರ್ಕಾರ ಬಿಡುಗಡೆ ಮಾಡಿರುವ ಜಾಹೀರಾತಿನಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿದೆ.
ಅಸ್ಸೋಂ ರಾಜ್ಯದ ಡಾಕಿನಿ ಬೆಟ್ಟಗಳ ತಪ್ಪಲಿನಲ್ಲಿರುವ ಪಮೋಹಿ ಗುವಾಹಟಿಯಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಭೀಮಾಶಂಕರ ಆರನೆಯದು. ಅಸ್ಸೋಂನ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವ ಶರ್ಮಾ ಅವರು, ಜಾಹೀರಾತಿನ ಮೂಲಕ ಇಲ್ಲಿ ನಡೆಯುವ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದ್ದಾರೆ.
ಪ್ರಧಾನ ಅರ್ಚಕರಿಂದ ಸ್ಪಷ್ಟನೆ: ಭೀಮಾಶಂಕರ ದೇವಸ್ಥಾನದ ಉಪ ಕಾರ್ಯನಿರ್ವಾಹಕ ಟ್ರಸ್ಟಿ ಮಧುಕರ ಶಾಸ್ತ್ರಿ ಗಾವಂಡೆ ಸಂಪೂರ್ಣ ಮಾಹಿತಿ ನೀಡಿದ ಅವರು, ''ಪುಣೆ ಜಿಲ್ಲೆಯ ಭೀಮಾಶಂಕರದಲ್ಲಿ ಅನಾದಿಕಾಲದಿಂದಲೂ ಜ್ಯೋತಿರ್ಲಿಂಗವಿದೆ. ಇದನ್ನು ಶಿವಪುರಾಣ, ಶಿವಲೀಲಾಮೃತದಲ್ಲಿ ಉಲ್ಲೇಖಿಸಲಾಗಿದೆ. ಶಂಕರಾಚಾರ್ಯರು ಸಹ್ಯಾದ್ರಿ ಪರ್ವತ ಶ್ರೇಣಿಯ ಭೀಮಾ ನದಿಯಲ್ಲಿರುವ ಭೀಮಾಶಂಕರದ ಮೇಲೆ ಒಂದು ಕಾವ್ಯ ರಚಿಸಿದ್ದಾರೆ'' ಎಂದು ತಿಳಿಸಿದರು.
''ಶಿವಾಜಿ ಮಹಾರಾಜ ಕೂಡಾ ಈ ಜ್ಯೋತಿರ್ಲಿಂಗವನ್ನು ಗೌರವಿಸುತ್ತಿದ್ದರು. ಅಸ್ಸೋಂನಲ್ಲಿರುವ ಶಿವಲಿಂಗ ದೊಡ್ಡದಾಗಿದ್ದರೆ, ಭೀಮಾಶಂಕರದಲ್ಲಿರುವ ಶಿವಲಿಂಗವು ತುಂಬಾ ವಿಶೇಷವಾಗಿದ್ದು, ಶಂಕರ ಮತ್ತು ಪಾರ್ವತಿ ಎಂದು ವಿಂಗಡಿಸಲಾಗಿದೆ. ಅಂತಹ ವೈಶಿಷ್ಟ್ಯವಿರುವ ಶಿವ ದೇವಾಲಯ ಮತ್ತೊಂದಿಲ್ಲ. ದೇಶದ ಇತರ ಜ್ಯೋತಿರ್ಲಿಂಗಗಳಲ್ಲಿ ಇದೇ ರೀತಿಯ ವಿವಾದಗಳು ಸೃಷ್ಟಿಯಾದಗಿದ್ದವು. ಈಗಲೂ ಇದನ್ನು ಭಕ್ತರು ನಂಬಬಾರದು'' ಎಂದು ಗಾವಂಡೆ ಗುರೂಜಿ ಹೇಳಿದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್: ಕೇರಳ ಸಿಎಂ ಮಾಜಿ ಮುಖ್ಯ ಕಾರ್ಯದರ್ಶಿ ಬಂಧನ