ನವದೆಹಲಿ: ಪ್ರತಿಪಕ್ಷ ನಾಯಕರಾದ ಶರದ್ ಪವಾರ್, ರಾಹುಲ್ ಗಾಂಧಿ, ಡಿ. ರಾಜಾ, ಸೀತಾರಾಮ್ ಯೆಚೂರಿ ಮತ್ತು ಟಿ ಕೆ ಎಸ್ ಎಲಂಗೋವನ್ ಅವರು ಇಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಗೆ ನಿವೇದನಾ ಪತ್ರ (ಮೆಮೊರಂಡಮ್) ಸಲ್ಲಿಸಿದ್ರು.
ನಾವು ರೈತರೊಂದಿಗೆ ಇದ್ದೇವೆ. ರೈತರು ಹಿಂದೆ ಸರಿಯಬೇಕಾಗಿಲ್ಲ. ಈ ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ನಾವು ರಾಷ್ಟ್ರಪತಿ ಅವರಿಗೆ ಮನವಿ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೃಷಿ ಮಸೂದೆಗಳ ಕುರಿತು ಇನ್ನೂ ಚರ್ಚೆ ನಡೆಸಬೇಕು. ಇದನ್ನು ಆಯ್ಕೆ ಸಮಿತಿಗೆ ಕಳಿಸಬೇಕು ಎಂದು ಪ್ರತಿಪಕ್ಷಗಳು ಮನವಿ ಮಾಡಿದ್ದವು. ಆದ್ರೆ, ದುರಾದೃಷ್ಟವಶಾತ್ ಯಾವುದೇ ಸಲಹೆ ಸ್ವೀಕರಿಸಲಿಲ್ಲ ಮತ್ತು ಮಸೂದೆಗಳನ್ನು ಅವಸರದಲ್ಲಿ ಅಂಗೀಕರಿಸಲಾಯಿತು. ರೈತರು ಎಂಎಸ್‌ಪಿಗಾಗಿ ಹೋರಾಡುತ್ತಿದ್ದಾರೆ. ಇದು ನ್ಯಾಯಸಮ್ಮತ ಮತ್ತು ಅವರ ಹಕ್ಕಾಗಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಇದನ್ನು ಓದಿ:ಪ್ರಜಾಪ್ರಭುತ್ವವನ್ನು ತೊಡೆದುಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ: ರಾಹುಲ್ ಗಾಂಧಿ
ನಾವು ರಾಷ್ಟ್ರಪತಿ ಅವರಿಗೆ ನಿವೇದನ ಪತ್ರ ನೀಡಿದ್ದೇವೆ. ಸರಿಯಾದ ಚರ್ಚೆ, ಸಮಾಲೋಚನೆ ಮಾಡದೇ ಪ್ರಜಾಪ್ರಭುತ್ವಕ್ಕೆ ವಿರೋಧವಾದ ರೀತಿಯಲ್ಲಿ ಅಂಗೀಕರಿಸಲ್ಪಟ್ಟ ಕೃಷಿ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಗೊಳಿಸುವಂತೆ ನಾವು ಮನವಿ ಮಾಡಿಕೊಂಡಿದ್ದೇವೆ. ರಾಷ್ಟ್ರಪತಿ ಅವರು ಇದನ್ನು ಪರಿಶೀಲಿಸುತ್ತೇನೆ ಎಂದು ನಮಗೆ ಭರವಸೆ ನೀಡಿದ್ದಾರೆಂದು ಸೀತಾರಾಮ್ ಯೆಚೂರಿ ಹೇಳಿದ್ದಾರೆ.