ಚೆನ್ನೈ(ತಮಿಳುನಾಡು): ಈ ಹಿಂದಿನಿಂದಲೂ ಕರ್ನಾಟಕದ ಮೇಕೆದಾಟು ಯೋಜನೆಯ ವಿಚಾರವಾಗಿ ಕ್ಯಾತೆ ತೆಗೆಯುತ್ತಾ ಬಂದಿರುವ ನೆರೆ ರಾಜ್ಯ ತಮಿಳುನಾಡು, ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿನ ವಿಧಾನಸಭೆಯಲ್ಲಿ ಈ ಯೋಜನೆಯನ್ನು ವಿರೋಧಿಸಿ ನಿರ್ಣಯ ಮಂಡಿಸಿದೆ.
ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಕರ್ನಾಟಕದ ನಿರ್ಧಾರ ವಿರೋಧಿಸಿ ಮಾತನಾಡಿ, ಮೇಕೆದಾಟು ಯೋಜನೆಯ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್ನಲ್ಲಿ ಮೇಕೆದಾಟು ಯೋಜನೆಯನ್ನು ಕಾರ್ಯರೂಪಕ್ಕೆ ತರಲು 1,000 ಕೋಟಿ ರೂ. ಮೀಸಲಿಡಲಾಗಿತ್ತು. ಇದಕ್ಕೆ ತಮಿಳುನಾಡು ಸರ್ಕಾರ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರ ಬಜೆಟ್ನಲ್ಲಿ ಹಣ ಮೀಸಲಿಟ್ಟಿರುವುದು ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಅಲ್ಲಿನ ಸರ್ಕಾರ ವಿಧಾನಸಭೆಯಲ್ಲೂ ಯೋಜನೆಯ ವಿರುದ್ಧ ನಿರ್ಣಯ ಮಂಡಿಸಿದೆ.
ತಮಿಳುನಾಡು ಬಿಜೆಪಿಯಿಂದಲೂ ಬೆಂಬಲ: ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರೋಧಿ ನಿರ್ಣಯ ಮಂಡನೆ ಮಾಡುತ್ತಿದ್ದಂತೆ ಬಿಜೆಪಿ ಕೂಡ ಅದಕ್ಕೆ ಬೆಂಬಲ ಸೂಚಿಸಿದೆ.
ಇತ್ತೀಚೆಗೆ, ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಸಹ ನಡೆಸಿತ್ತು. ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರ ಬಜೆಟ್ನಲ್ಲಿ ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಇದಕ್ಕೆ ಸರ್ವ ಪಕ್ಷಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಸರ್ವಪಕ್ಷ ಸಭೆ ನಡೆಸಿದ್ದ ಸಿಎಂ ಬೊಮ್ಮಾಯಿ, ಅಗತ್ಯ ಬಿದ್ದರೆ ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರದ ಬಳಿ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗುವುದಾಗಿ ಅವರು ತಿಳಿಸಿದ್ದರು.