QR Code PAN Card: ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್(PAN Card) ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತಿರುವಂಥದ್ದೇ. ತೆರಿಗೆದಾರರ ಗುರುತಿಗಾಗಿ ಮುಂಚೂಣಿಗೆ ಬಂದ ಪ್ಯಾನ್ ಇನ್ನು ಮುಂದೆ ಕ್ಯೂಆರ್ ಕೋಡ್‌ನೊಂದಿಗೆ ಬರಲಿದೆ. ಇದರಿಂದ ತೆರಿಗೆದಾರರ ಡಿಜಿಟಲ್ ಅನುಭವ ಹೆಚ್ಚಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಪ್ಯಾನ್ 2.0 ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.
ಏನಿದರ ಉದ್ದೇಶ?: ಸರ್ಕಾರಿ ಇಲಾಖೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಲ್ಲಿ ಪ್ಯಾನ್ ಅನ್ನು ಮುಖ್ಯ ಗುರುತಿಸುವಿಕೆಯಾಗಿ ಬಳಸುವುದು ಇದರ ಹಿಂದಿನ ಉದ್ದೇಶ. ಈ ಯೋಜನೆಗೆ ಕೇಂದ್ರ ಸರ್ಕಾರ 1,435 ಕೋಟಿ ರೂಪಾಯಿ ವ್ಯಯಿಸಲಿದೆ. ಪ್ಯಾನ್ 2.0 ಯೋಜನೆಯು ತಂತ್ರಜ್ಞಾನದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ದೊಡ್ಡ ಬದಲಾವಣೆ ತರಲು ಸಹಾಯ ಮಾಡಲಿದೆ. ತೆರಿಗೆದಾರರು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸುಲಭವಾಗಿ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಸೇವೆಗಳ ವಿತರಣೆಯನ್ನೂ ತ್ವರಿತಗೊಳಿಸಬಹುದು ಮತ್ತು ಗುಣಮಟ್ಟವೂ ಸುಧಾರಿಸಲಿದೆ. ಎಲ್ಲಾ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿರುತ್ತದೆ. ಡೇಟಾ ಸುರಕ್ಷಿತವಾಗಿ ಉಳಿಯುತ್ತದೆ. ಪರಿಸರಸ್ನೇಹಿ ಪ್ರಕ್ರಿಯೆ ವೆಚ್ಚ ತಗ್ಗಿಸುತ್ತದೆ.
Cabinet approves the PAN 2.0 Project of the Income Tax Department
— PIB India (@PIB_India) November 25, 2024
The financial implications for the PAN 2.0 Project will Rs. 1,435 crore
The #PAN 2.0 Project enables technology-driven transformation of Taxpayer registration services
Read here: https://t.co/wmzjJtKkhj… pic.twitter.com/jbVBOLIg9d
ಉಚಿತ QR ಕೋಡ್ ಪ್ಯಾನ್ ಕಾರ್ಡ್: ಪ್ಯಾನ್ 2.0 ಯೋಜನೆಯಡಿ ಕ್ಯೂಆರ್ ಕೋಡ್ ಹೊಂದಿರುವ ಹೊಸ ಪ್ಯಾನ್ ಕಾರ್ಡ್ ಅನ್ನು ತೆರಿಗೆದಾರರಿಗೆ ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ಯಾನ್ 2.0 ಪ್ರಾಜೆಕ್ಟ್ ಅಸ್ತಿತ್ವದಲ್ಲಿರುವ PAN/TAN 1.0 ಫ್ರೇಮ್‌ವರ್ಕ್‌ನ ಅಪ್‌ಗ್ರೇಡ್ ಆವೃತ್ತಿಯಾಗಿದ್ದು, ಕೋರ್ ಮತ್ತು ಕೋರ್ ಅಲ್ಲದ PAN/TAN ಚಟುವಟಿಕೆಗಳೊಂದಿಗೆ ಪ್ಯಾನ್ ಪರಿಶೀಲನೆ ಸೇವೆಯನ್ನು ಸಂಯೋಜಿಸುತ್ತದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ, ದೇಶದಲ್ಲಿ ಸುಮಾರು 78 ಕೋಟಿ ಪ್ಯಾನ್‌ಗಳನ್ನು ನೀಡಲಾಗಿದ್ದು, ಈ ಪೈಕಿ ಶೇ 98ರಷ್ಟು ಪ್ಯಾನ್‌ಗಳನ್ನು ವೈಯಕ್ತಿಕವಾಗಿ ನೀಡಲಾಗಿದೆ.
PAN ಕಾರ್ಡ್ ಎಂದರೇನು?, ಏಕೆ ಬೇಕು?: ಆದಾಯ ತೆರಿಗೆ ಇಲಾಖೆಯಿಂದ(IT) ನೀಡಲಾಗುವ 10 ಅಂಕಿಯ ಆಲ್ಫಾನ್ಯೂಮರಿಕ್ ಗುರುತಿನ ಚೀಟಿಯೇ ಪ್ಯಾನ್. ಇದಕ್ಕಾಗಿ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಗೆ ಈ ಕಾರ್ಡ್ ನೀಡಲಾಗುತ್ತದೆ. PAN ಸಂಖ್ಯೆಯ ಮೂಲಕ ಯಾವುದೇ ವ್ಯಕ್ತಿಯ ಆನ್‌ಲೈನ್ ಅಥವಾ ಹಣಕಾಸಿನ ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆ ಮೇಲ್ವಿಚಾರಣೆ ಮಾಡುತ್ತದೆ.
ಇದನ್ನೂ ಓದಿ: ದೇಹ ಚಲನೆಯಿಂದಲೇ ವಿದ್ಯುತ್ ಉತ್ಪಾದನೆ: ಇದು ವೇರೆಬಲ್ ಜನರೇಟರ್; ನಿಮ್ಮ ಮೊಬೈಲ್, ಇತರೆ ಸಾಧನಗಳು ಚಾರ್ಜ್!