ನವದೆಹಲಿ: ಪೂರ್ವ ಕೆರಿಬಿಯನ್ ದ್ವೀಪ ರಾಷ್ಟ್ರದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ಯಾವುದೇ ಕಾನೂನು ಹಕ್ಕುಗಳನ್ನು ಹೊಂದಿಲ್ಲ. ಆತನನ್ನು ಭಾರತಕ್ಕೆ ಗಡಿಪಾರು ಮಾಡಿ ಎಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮಾಜಿ ನಿರ್ದೇಶಕ ಎ.ಪಿ.ಸಿಂಗ್ ಹೇಳಿದ್ದಾರೆ.
ಸಿಂಗ್ ಮಾತನಾಡಿ, “ಡೊಮಿನಿಕಾದಲ್ಲಿ ಯಾವುದೇ ಕಾನೂನು ಹಕ್ಕುಗಳಿಲ್ಲದ ಕಾರಣ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡಲು ಸಾಧ್ಯವಿದೆ. ಆದರೆ ಅಲ್ಲಿನ ನ್ಯಾಯಾಲಯ ಅದಕ್ಕೆ ತೀರ್ಪು ನೀಡಬೇಕಾಗಿದೆ” ಎಂದು ಹೇಳಿದ್ದಾರೆ.
ಅಪರಾಧಿಗಳು ಅಥವಾ ಪರಾರಿಯಾದವರನ್ನು ಗಡಿಪಾರು ಮಾಡಲು ಅಥವಾ ಹಸ್ತಾಂತರಿಸಲು ದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಅನಿವಾರ್ಯವಲ್ಲ ಎಂದು ಸಿಂಗ್ ಹೇಳಿದರು.
ಇಂಟರ್ಪೋಲ್ 2018ರ ಡಿಸೆಂಬರ್‌ನಲ್ಲಿ ಚೋಕ್ಸಿ ವಿರುದ್ಧ ರೆಡ್ ನೋಟಿಸ್ ನೀಡಿತ್ತು. ಚೋಕ್ಸಿಯ ವಕೀಲರ ಪ್ರಕಾರ, ಆಭರಣ ವ್ಯಾಪಾರಿ ಆಂಟಿಗುವಾದಿಂದ ಪಲಾಯನ ಮಾಡಿಲ್ಲ. ಆದರೆ ಬಲವಂತವಾಗಿ ಅಪಹರಿಸಿ ಥಳಿಸಿ ಡೊಮಿನಿಕಾಗೆ ಕರೆದೊಯ್ಯಲಾಯಿತು ಎನ್ನಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ 13 ಸಾವಿರ ಕೋಟಿ ಸಾಲ ವಂಚನೆ ಮಾಡಿರುವ ಪ್ರಕರಣದಲ್ಲಿ ಚೋಕ್ಸಿ ಪ್ರಮುಖ ಆರೋಪಿ ಆಗಿದ್ದಾನೆ. ಬ್ಯಾಂಕ್ ವಂಚನೆ ಆರೋಪ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ಭಾರತಕ್ಕೆ ಆತನನ್ನು ಗಡಿಪಾರು ಮಾಡುವಂತೆ ಮನವಿ ಮಾಡಲಾಗಿದೆ.