ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಅದೃಷ್ಟವಶಾತ್ ಮೆಹಬೂಬಾ ಮುಫ್ತಿ ಸೇರಿ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೆಹಬೂಬಾ ಮುಫ್ತಿ ತಮ್ಮ ಕಾರಿನಲ್ಲಿ ಅನಂತನಾಗ್‌ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ, ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಂಗಮ್ ಪ್ರದೇಶದಲ್ಲಿ ಟ್ರಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ಮೆಹಬೂಬಾ ಮುಫ್ತಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಅವರ ಕಾರಿನ ಚಾಲಕನ ಕಾಲಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಈ ವಿಷಯವನ್ನು ಪಿಡಿಪಿ ವೈದ್ಯಕೀಯ ತಂಡ ಸಹ ಸ್ಪಷ್ಟಪಡಿಸಿದೆ.
64 ವರ್ಷದ ಮೆಹಬೂಬಾ ಮುಫ್ತಿ ಇತ್ತೀಚೆಗೆ ಅನಂತನಾಗ್ನಲ್ಲಿ ಅಗ್ನಿ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರನ್ನು ಭೇಟಿ ಮಾಡಲು ತೆರಳುತ್ತಿದ್ದರು. ಕಾರು ಅಪಘಾತದ ನಂತರವೂ ಅವರು ಗಾಯಾಳುಗಳನ್ನು ಭೇಟಿ ಮಾಡಿದರು ಎಂದು ವರದಿಯಾಗಿದೆ. ಈ ಘಟನೆ ಕುರಿತು ಪುತ್ರಿ ಇಲ್ಜಾ ಮುಫ್ತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಫ್ತಿ ಅವರ ಕಾರು ಇಂದು ಅನಂತನಾಗ್ ಮಾರ್ಗದಲ್ಲಿ ಅಪಘಾತಕ್ಕೆ ಈಡಾಗಿದೆ. ದೇವರ ದಯೆಯಿಂದ ಅವರು ಮತ್ತು ಅವರ ಭದ್ರತಾ ಅಧಿಕಾರಿಗಳು ಯಾವುದೇ ಗಂಭೀರ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಅವರು ತುಂಬಾ ಗಂಭೀರವಾದ ಘಟನೆಯಲ್ಲಿ ಪಾರಾಗಿದ್ದಾರೆ. ಅಪಘಾತದ ಸಂದರ್ಭಗಳ ಬಗ್ಗೆ ಸರ್ಕಾರವು ವಿಚಾರಣೆ ನಡೆಸಬೇಕು. ಈ ಅಪಘಾತಕ್ಕೆ ಕಾರಣವಾದ ಅವರ ಭದ್ರತೆಯಲ್ಲಿ ಯಾವುದೇ ಲೋಪದೋಷಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಫಾರೂಕ್ ಅಬ್ದುಲ್ಲಾಗೆ ಇಡಿ ಸಮನ್ಸ್; ಮುಫ್ತಿ ಪ್ರತಿಕ್ರಿಯೆ: ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ನ ಹಣ ವರ್ಗಾವಣೆ ಆರೋಪದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಇಡಿ ಸಮನ್ಸ್ ನೀಡಿರುವ ಬಗ್ಗೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.
ದೇಶದಲ್ಲಿ ಪ್ರತಿಪಕ್ಷದ ರಾಜಕೀಯ ನಾಯಕರ ಕಿರುಕುಳ ಮತ್ತು ಬೆದರಿಕೆಯು ಈಗ ಒಂದು ಪ್ರಕ್ರಿಯೆಯಾಗಿದೆ. ವಿಧಾನಸಭೆ ಅಥವಾ ಸಂಸತ್ತಿನ ಚುನಾವಣೆಗಳು ಬಂದಾಗ ಪ್ರತಿಪಕ್ಷದ ನಾಯಕರನ್ನು ಇಡಿ, ಎನ್ಐಎ ಅಥವಾ ಸಿಬಿಐ ಮೂಲಕ ಕರೆಸಿ ಕಿರುಕುಳ ನೀಡಲಾಗುತ್ತದೆ ಎಂದು ಮುಫ್ತಿ ದೂರಿದರು. ಇನ್ನು, ಫಾರೂಕ್ ಅಬ್ದುಲ್ಲಾ ಅನಾರೋಗ್ಯದ ಕಾರಣದಿಂದ ಇಡಿ ಮುಂದೆ ಹಾಜರಾಗಿಲ್ಲ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಫಾರೂಕ್ ಅಬ್ದುಲ್ಲಾಗೆ ಜಾರಿ ನಿರ್ದೇಶನಾಲಯ ಸಮನ್ಸ್