ಮೀರತ್ (ಉತ್ತರ ಪ್ರದೇಶ): ಇಲ್ಲಿನ ಮೀರತ್ ಜಿಲ್ಲೆಯ ಜನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ (ನಿನ್ನೆ, ಆಗಸ್ಟ್ 9) ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಫಿಜಿ ದೇಶದ (Fiji, country in Oceania) ವ್ಯಕ್ತಿಯೋರ್ವ ಮದುವೆ ಪ್ರಸ್ತಾಪದೊಂದಿಗೆ ತನ್ನ ಗೆಳತಿಯ ಮನೆಗೆ ಭೇಟಿ ಕೊಟ್ಟಿದ್ದಾನೆ. ಈತನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಹೀಗಿದ್ದರೂ ಹೊಸ ಮದುವೆ ಪ್ರಸ್ತಾಪದೊಂದಿಗೆ ಸಮುದ್ರ ದಾಟಿ ಮೀರತ್ ತಲುಪಿದ್ದಾನೆ.
ಹೀಗೆ ಹುಡುಗಿ ಮನೆ ತಲುಪಿದ ವ್ಯಕ್ತಿ, ಆಕೆಯ ಕುಟುಂಬ ಸದಸ್ಯರೊಂದಿಗೆ ಮದುವೆ ಪ್ರಸ್ತಾಪ ಇಟ್ಟಿದ್ದಾನೆ. ಇದರಿಂದ ಕೋಪಗೊಂಡ ಪೋಷಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಈತನ ಹೆಸರು ಸೈಯೆದ್ ಫಜಲ್. ವಯಸ್ಸು ಸುಮಾರು 45. ಮೂರು ಮಕ್ಕಳ ತಂದೆ ಎಂದು ಪೊಲೀಸ್ ಠಾಣಾಧಿಕಾರಿ ಪ್ರಜಂತ್ ಮಾಹಿತಿ ನೀಡಿದರು.
ಸರಕು ಖರೀದಿ ಮತ್ತು ಇತರೆ ಸ್ಥಳಗಳಿಗೆ ಸರಬರಾಜು ಮಾಡುವ ಉದ್ಯೋಗದ ಮಾಡುತ್ತಿದ್ದಾನೆ. ಇದೀಗ ಪೊಲೀಸರು ಪಾಸ್ಪೋರ್ಟ್ ಮತ್ತು ವೀಸಾ ಪರಿಶೀಲಿಸುತ್ತಿದ್ದಾರೆ. ಯುವತಿ ಮೊಬೈಲ್ನಲ್ಲಿ ವಾಟ್ಸ್ಆ್ಯಪ್ ಚಾಟ್ ಮಾಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪ್ರಕರಣ ದೇಶದ ಭದ್ರತೆಗೆ ಸಂಬಂಧಿಸಿದ್ದು ವ್ಯಕ್ತಿಯನ್ನು ಗುಪ್ತಚರ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಠಾಣಾಧಿಕಾರಿ ಹೇಳುವ ಪ್ರಕಾರ, "ಸೈಯೆದ್ ಫಜಲ್‌ನ ಕೆಲವು ಸಂಬಂಧಿಕರು ರಾಂಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಹಾಗಾಗಿ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಫಜಲ್ ಕೂಡ ದಾಖಲೆ, ಸಾಕ್ಷಿಗಳನ್ನು ಪೊಲೀಸರಿಗೆ ತೋರಿಸಿದ್ದಾನೆ. ಇದು ಈತ ಯುವತಿಯ ಸ್ನೇಹಿತ ಎಂಬುದನ್ನು ಖಚಿತಪಡಿಸಿದೆ. ಚಾಟಿಂಗ್ ವೇಳೆ ಯುವತಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಳು ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ. ಯುವತಿ ಕಡೆಯಿಂದ ಮದುವೆ ವಿಚಾರ ಬಂದ ಹಿನ್ನೆಲೆಯಲ್ಲಿ ವ್ಯಕ್ತಿ ವೈವಾಹಿಕ ಜೀವನದ ಕನಸು ಕಟ್ಟಿಕೊಂಡು, ಮೀರತ್ ತಲುಪಿದ್ದಾನೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ಹೊಟೇಲ್ವೊಂದರಲ್ಲಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಸ್ನೇಹಿತ!
ಹೆಂಡತಿ ತನ್ನನ್ನು ತೊರೆದಿದ್ದಾಳೆ ಎಂದು ವಿಚಾರಣೆಯಲ್ಲಿ ಸೈಯೆದ್ ಫಜಲ್ ಹೇಳಿಕೊಂಡಿದ್ದಾನೆ. ಎಂಟು ತಿಂಗಳ ಹಿಂದೆ ಈತನಿಗೆ ಮೀರತ್‌ನ ಯುವತಿ ಇರುವ ಗ್ರಾಮದ ವ್ಯಕ್ತಿಯೋರ್ವನ ಸಂಪರ್ಕವಾಗಿದೆ. ನಂತರ ಇಲ್ಲಿಗೆ ಬಂದು ಹೋಗುತ್ತಿದ್ದ. ಆ ಸಂದರ್ಭದಲ್ಲಿ ಹುಡುಗಿಯ ಪರಿಚಯವಾಗಿದೆ. ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಯುವತಿ ಕುಟುಂಬಸ್ಥರ ಒಪ್ಪಿಗೆಯಿಲ್ಲದೇ ನಾನು ಮದುವೆಯಾಗಲು ಬಯಸುವುದಿಲ್ಲ ಎಂದು ಕೂಡ ಹೇಳಿದ್ದಾನೆ. ಆದ್ರೆ ಹುಡುಗಿ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದಾರೆ.
ಇತ್ಚೀಚೆಗೆ, ರಾಜಸ್ಥಾನದ ಮಹಿಳೆ ಅಂಜು ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಗೆಳೆಯನನ್ನು ವಿವಾಹವಾಗಿದ್ದು ಭಾರಿ ಸುದ್ದಿಯಾಗಿತ್ತು.
ಇದನ್ನೂ ಓದಿ: Margadarshi ಚಿಟ್ಫಂಡ್ ಪ್ರಕರಣಗಳ ವಾದ-ಪ್ರತಿವಾದ ಪೂರ್ಣ.. ಮಧ್ಯಂತರ ಆದೇಶ ಕಾಯ್ದಿರಿಸಿದ ಆಂಧ್ರಪ್ರದೇಶ ಹೈಕೋರ್ಟ್