ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಕರೆತರಲು ಭಾರತ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಮಾತನಾಡಿ, ಚೋಕ್ಸಿ ಪ್ರಸ್ತುತ ಡೊಮಿನಿಕಾದಲ್ಲಿ ಬಂಧನದಲ್ಲಿದ್ದಾರೆ. ಅಲ್ಲಿ ಕೆಲವು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅವರನ್ನು ಭಾರತಕ್ಕತ ಕರೆ ತರುತ್ತೇವೆ ಎಂದಿದ್ದಾರೆ.
ಚೋಕ್ಸಿ ಇತ್ತೀಚೆಗೆ ಆಂಟಿಗುವಾ ಮತ್ತು ಬಾರ್ಬುಡಾದಿಂದ ತಪ್ಪಿಸಿಕೊಂಡು ಮೇ 23 ರಂದು ಕೆರಿಬಿಯನ್ ದ್ವೀಪ ರಾಷ್ಟ್ರವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಲಾಯಿತು. ಡೊಮಿನಿಕಾದಲ್ಲಿ ಆತನ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ 13,500 ಕೋಟಿ ರೂ. ವಂಚಿಸಿರುವ ಆರೋಪದಡಿ ಚೋಕ್ಸಿ ಭಾರತಕ್ಕೆ ಬೇಕಾಗಿದ್ದಾರೆ.
ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಜಾಮೀನು ನಿರಾಕರಿಸಿದೆ. ಚೋಕ್ಸಿಯ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆಲಿಸಿದ ಡೊಮಿನಿಕಾ ಹೈಕೋರ್ಟ್, ಅಕ್ರಮ ಪ್ರವೇಶದ ಆರೋಪಗಳನ್ನು ಎದುರಿಸಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಂತೆ ಆದೇಶಿಸಿತು.