ನವ ದೆಹಲಿ: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ORGI) ಕಚೇರಿಯು ಪ್ರಕಟಿಸಿದ 'ಭಾರತದಲ್ಲಿ ತಾಯಂದಿರ ಮರಣದ ವಿಶೇಷ ವರದಿ 2018-20' ಪ್ರಕಾರ ದೇಶದಲ್ಲಿ ತಾಯಂದಿರ ಮರಣ ಪ್ರಮಾಣ (MMR) 2018-20 ಗಮನಾರ್ಹವಾಗಿ ಇಳಿಮುಖವಾಗಿದೆ.
ಇತ್ತೀಚಿನ ಅಂಕಿಅಂಶಗಳಂತೆ, 2017-19ರ ಅವಧಿಯಲ್ಲಿ ದೇಶದ ತಾಯಂದಿರ ಮರಣ ಪ್ರಮಾಣ 103 ಇತ್ತು. ಆದ್ರೆ, 2018-20ರ ಅವಧಿಯಲ್ಲಿ 97 ಕ್ಕೆ ಇಳಿದಿದೆ. ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಪ್ರಮಾಣ 2015-17ರಲ್ಲಿ 122 ಆಗಿದ್ದರೆ, 2014-16ರ ಅವಧಿಯಲ್ಲಿ 130 ಇತ್ತು.
'ಪ್ರತಿ ಲಕ್ಷ ಜೀವಂತ ಜನನಗಳಿಗೆ 2014-16 ರಲ್ಲಿ 130 ಇದ್ದ ತಾಯಿಯ ಮರಣದ ಅನುಪಾತ 2018-20 ರಲ್ಲಿ 97ಕ್ಕೆ ಗಮನಾರ್ಹವಾಗಿ ಇಳಿಕೆಯಾಗಿದೆ. ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಭಾರತದಲ್ಲಿ ತಾಯಂದಿರ ಮರಣ ದರ ಕಡಿಮೆಯಾಗಿದೆ' ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತಾಯಂದಿರ ಮರಣ ಪ್ರಮಾಣ ಇಳಿಕೆ: ದೇಶದಲ್ಲೇ ಕರ್ನಾಟಕ ನಂ.1
ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿ (SDG) 3.1 ಅಡಿಯಲ್ಲಿ ಜಾಗತಿಕ ತಾಯಂದಿರ ಮರಣದ ಅನುಪಾತವನ್ನು 1,00,000 ಜೀವಂತ ಜನನಗಳಿಗೆ 70 ಕ್ಕಿಂತ ಕಡಿಮೆ ಮಾಡುವ ಉದ್ದೇಶವಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ದತ್ತಾಂಶ ಮತ್ತು ಹಿಂದಿನ ದತ್ತಾಂಶಕ್ಕೆ ಹೋಲಿಸಿದರೆ ಕೆಲವು ರಾಜ್ಯಗಳಲ್ಲಿ MMR ಕಡಿಮೆ ದಾಖಲಾಗಿದೆ. ಆಂಧ್ರಪ್ರದೇಶ (45), ತೆಲಂಗಾಣ (43), ಕರ್ನಾಟಕ (69), ಕೇರಳ (19) ಮತ್ತು ತಮಿಳುನಾಡು (54) ಅತಿ ಕಡಿಮೆ ತಾಯಂದಿರ ಮರಣ ಪ್ರಮಾಣವನ್ನು ದಾಖಲಿಸಿವೆ.
ದೇಶದಲ್ಲಿ ತಾಯಂದಿರ ಮರಣದ ಪರಿಸ್ಥಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ವಿಶೇಷವಾಗಿ ಪ್ರಾದೇಶಿಕ ಮಟ್ಟದಲ್ಲಿ ಉಂಟಾದ ಬದಲಾವಣೆಗಳನ್ನು ಗುರುತಿಸಲು ರಾಜ್ಯಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ, ಎಂಪವರ್ಡ್ ಆ್ಯಕ್ಷನ್ ಗ್ರೂಪ್, ದಕ್ಷಿಣ ರಾಜ್ಯಗಳು ಮತ್ತು ಇತರೆ ರಾಜ್ಯಗಳು.
ಇದನ್ನೂ ಓದಿ: ಪೌಷ್ಟಿಕತೆ ಕೊರತೆ: ರಾಜ್ಯದಲ್ಲಿ ಭಯ ಹುಟ್ಟಿಸುವಂತಿದೆ ತಾಯಿ ಮತ್ತು ಶಿಶು ಮರಣ ಪ್ರಮಾಣ
ಎಂಪವರ್ಡ್ ಆಕ್ಷನ್ ಗ್ರೂಪ್ನಲ್ಲಿ ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಿವೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಅನ್ನು 'ದಕ್ಷಿಣ' ರಾಜ್ಯಗಳನ್ನಾಗಿ ಮಾಡಲಾಗಿದ್ದು, ಉಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು 'ಇತರೆ' ರಾಜ್ಯಗಳ ಗುಂಪು ಒಳಗೊಂಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನಿಯಂತ್ರಣಕ್ಕೆ ಬಾರದ ತಾಯಿ, ಶಿಶು ಮರಣ ಪ್ರಮಾಣ.. ಆರು ತಿಂಗಳಲ್ಲಿ 4,838 ಸಾವು!