ತಿರುಪತಿ (ಆಂಧ್ರಪ್ರದೇಶ) : ಜಗತ್ತಿನ ಶ್ರೀಮಂತ ದೇವರೆಂದೇ ಪ್ರಸಿದ್ಧವಾದ ತಿರುಪತಿಯ ತಿರುಮಲ ವೆಂಕಟೇಶ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ದೇವರ ದರ್ಶನಕ್ಕಾಗಿ 48 ಗಂಟೆಗೂ ಅಧಿಕ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ದೇವಸ್ಥಾನಕ್ಕೆ ಭೇಟಿ ನೀಡುವ ದಿನದಲ್ಲಿ ಭಕ್ತರು ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಮುಂದೂಡುವಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ಮನವಿ ಮಾಡಿದೆ.
ಕೋವಿಡ್ ಮತ್ತು ಲಾಕ್ಡೌನ್ ಕಾರಣದಿಂದಾಗಿ ಎರಡು ವರ್ಷಗಳ ನಂತರ ತಿರುಪತಿಯಲ್ಲಿ ಭಕ್ತರಿಗೆ ಅವಕಾಶ ಸಿಕ್ಕಿದೆ. ಆದ್ದರಿಂದ ಭಾರಿ ಸಂಖ್ಯೆಯ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಹರಿದು ಬರುತ್ತಿದ್ದಾರೆ. ಅದರಲ್ಲೂ ವೈಕುಂಠ ಏಕಾದಶಿ, ಗರುಡ ಸೇವೆ ಸಂದರ್ಭದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಭಕ್ತಾದಿಗಳು ಬರುತ್ತಾರೆ. ಇದೇ ಕಾರಣದಿಂದ ಶ್ರೀವಾರಿ ದರ್ಶನ 48 ಗಂಟೆಗಳಷ್ಟು ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ಕಿಮೀ ಭಕ್ತರ ಸಾಲು : ದೇವರ ದರ್ಶನಕ್ಕಾಗಿ ಇರುವ ಎಲ್ಲ ಸಾಲುಗಳು ಭರ್ತಿಯಾಗಿವೆ. ಭಕ್ತರು ಕಾಯ್ದು ನಿಲ್ಲುವ 30 ವಿಭಾಗಗಳೂ ತುಂಬಿವೆ. ಇವುಗಳನ್ನು ಹೊರತುಪಡಿಸಿ 2 ಕಿ.ಮೀ.ನಷ್ಟು ಭಕ್ತರ ಸಾಲು ಇದೆ. ಬೆಟ್ಟದ ಪ್ರವೇಶ ಮಾರ್ಗ ಬಳಿಯೂ ವಾಹನಗಳ ಉದ್ದನೆಯ ಸಾಲಿದೆ. ಹೀಗಾಗಿ, ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು, ಹಾಲು, ಅನ್ನ ಪ್ರಸಾದದ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಕೆಲ ಭಕ್ತರು ಅನ್ನ ಪ್ರಸಾದ ಹಾಗೂ ಇತರ ಸೌಲಭ್ಯಗಳು ಸಿಗುತ್ತಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಟಿಟಿಡಿಯ ಇಒ ಧರ್ಮರೆಡ್ಡಿ ಮಾತನಾಡಿ, ತಿರುಮಲ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿ ಭಕ್ತರು ಬರುತ್ತಿದ್ದಾರೆ. ವೈಕುಂಟಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿರುವ 32 ಕಂಪಾರ್ಟ್‌ಮೆಂಟ್‌ಗಳೂ ತುಂಬಿ ತುಳುಕುತ್ತಿವೆ. ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದ ಶೆಡ್‌ಗಳಲ್ಲೂ ಭಕ್ತರು ತುಂಬಿದ್ದಾರೆ ಎಂದು ತಿಳಿಸಿದ್ದಾರೆ.
ಹೀಗಾಗಿ, ಎಲ್ಲ ಸಾಲಿನಲ್ಲಿ ನಿಂತ ಭಕ್ತರಿಗೆ ಶ್ರೀವಾರಿ ದರ್ಶನಕ್ಕೆ 48 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದೆ ಎಂದು ಮುಂಚೆಯೇ ಘೋಷಿಸಲಾಗಿದೆ. ಭಕ್ತಾದಿಗಳ ದಟ್ಟಣೆಯಿಂದಾಗಿ ಮೂರು ದಿನಗಳ ಕಾಲ ವಿರಾಮ ದರ್ಶನಗಳನ್ನು ರದ್ದುಪಡಿಸಲಾಗಿದೆ. ಅಲ್ಲದೇ, ಟೋಕನ್ ವಿತರಣೆ ಸ್ಥಗಿತಗೊಳಿಸಿದ್ದರೂ ಭಕ್ತರು ನೇರವಾಗಿ ದರ್ಶನಕ್ಕೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ಗಂಟೆಗೆ 4,500 ಭಕ್ತರಿಗಷ್ಟೇ ಅವಕಾಶ ಕಲ್ಪಿಸಲು ಸಾಧ್ಯವಿದೆ. ಆದರೆ, ಪ್ರತಿ ಗಂಟೆ ಸರದಿಗೆ ಸುಮಾರು 8 ಸಾವಿರ ಭಕ್ತರು ಸೇರ್ಪಡೆ ಆಗುತ್ತಿದ್ದಾರೆ. ಶುಕ್ರವಾರ 73,358 ಭಕ್ತರು ದರ್ಶನ ಪಡೆದಿದ್ದರೆ, ಶನಿವಾರ 89,318 ಭಕ್ತರಿಗೆ ದರ್ಶನ ಭಾಗ್ಯ ದೊರೆತಿದೆ. ಅನ್ನದಾನ ಸತ್ರದ ಆವರಣದ ಮೂಲಕವೂ ಭಕ್ತರನ್ನು ಕಳುಹಿಸಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಎರಡು ವರ್ಷಗಳ ನಂತರ ಭಾರತ-ಬಾಂಗ್ಲಾ ನಡುವೆ 'ಬಂಧನ್', 'ಮೈತ್ರಿ'ಗೆ ಚಾಲನೆ