ಜುನಾಗಢ (ಗುಜರಾತ್): ಸಾಂಪ್ರದಾಯಿಕ ಆಚರಣೆಗಳಿಗೆ ಸೆಡ್ಡು ಹೊಡೆದ ಒಂಭತ್ತು ಜೋಡಿಗಳು, ತಾಳಿ ಕಟ್ಟದೇ ಬೌದ್ಧ ಸಂಪ್ರದಾಯದ ಪ್ರಕಾರ ಹಸೆಮಣೆ ಏರಿದರು. ಜುನಾಗಢದ ಸಮ್ಯಕ್ ಸೇವಾ ಸಮಿತಿಯ ಆಶ್ರಯದಲ್ಲಿ ಈ ಸಾಮೂಹಿಕ ವಿವಾಹ ನಡೆದಿದ್ದು, ನವದಂಪತಿಗಳು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧನ ಫೋಟೋಗಳನ್ನು ಹಿಡಿದು ಅಪರೂಪದ ಮದುವೆಗೆ ಸಾಕ್ಷಿಯಾದರು.
ನವದಂಪತಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸುವ ಮೂಲಕ ಪ್ರಮಾಣವಚನ ಮಾಡಿಸಲಾಯಿತು. ಪೀಠಿಕೆಯ ಮೇಲೆ ಕೈಯಿಟ್ಟ ಅವರು, ಮೇಲು-ಕೀಳು ಎಂಬ ಭೇದ-ಭಾವ ಮಾಡದೇ ತಾವು ತಮ್ಮ ಜೀವನದುದ್ದಕ್ಕೂ ಒಟ್ಟಿಗೆ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ಬಳಿಕ ನವದಂಪತಿಗಳಿಗೆ ಅಲ್ಲಿದ್ದ ಸೇರಿದ್ದ ಜನರು ಹರಸಿದರು.
ಇದನ್ನೂ ಓದಿ: ಹಗರಣದಲ್ಲಿ ಶಿಕ್ಷಣ ಸಚಿವರು ಜೈಲು ಪಾಲಾಗಿದ್ದು ಇತಿಹಾಸದಲ್ಲೇ ಮೊದಲು: ಗೌತಮ್ ಗಂಭೀರ್ ಟೀಕೆ
ಮದುವೆ ಬಳಿಕ ಸಮ್ಯಕ್ ಸೇವಾ ಸಮಿತಿಯ ಆಡಳಿತಾಧಿಕಾರಿಗಳು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮೇಲು-ಕೀಳು ಎಂಬ ಜಾತಿ, ಧರ್ಮ, ಬಿಂಬಿಸುವ ಯಾವುದೇ ಶಾಸ್ತ್ರಗಳಿಲ್ಲದೆ ವರ ಮತ್ತು ವಧು ಪರಸ್ಪರ ಒಪ್ಪಿಕೊಂಡು ಇಲ್ಲಿ ಮದುವೆಯಾಗಿದ್ದಾರೆ. ಈ ಬಾರಿ ಬುದ್ಧ ಸಮೂಹ ಲಗ್ನ ಸೇವಾ ಸಮಿತಿ ಮತ್ತು ಸಮ್ಯಕ್ ಸೇವಾ ಸಮಿತಿ ಜಂಟಿಯಾಗಿ ಈ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗಿತ್ತು. ಮದುವೆಯಲ್ಲಿ ಅಂಬೇಡ್ಕರ್ ಮತ್ತು ಬುದ್ಧನ ಫೋಟೋಗಳ ಹೊರತು ಇಲ್ಲಿ ಮಂತ್ರ ಪಠಣವಾಗಲಿ, ಮಂಗಳಸೂತ್ರವಾಗಲಿ ಯಾವುದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ಅಂತಹ ಯಾವುದೇ ಆಚರಣೆಗಳಿಗೆ ಆಸ್ಪದ ನೀಡದೇ ಒಂಭತ್ತು ಜೋಡಿಗಳು ಮದುವೆಯಾದರು ಎಂದರು.
ಇದನ್ನೂ ಓದಿ: ರಾಜಮೌಳಿ ಹಾಗು ಕೀರವಾಣಿ ಅವರಿಂದ ಮೆಚ್ಚುಗೆ ಪಡೆದ ಚಿತ್ರಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ: ಶತಕದ ಖುಷಿ
ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ಗಾಜಿಯಾಬಾದ್‌ನಲ್ಲಿಯೂ ಸಾಮೂಹಿಕ ವಿವಾಹ ನಡೆಸಲಾಗಿತ್ತು. ‘ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ’ ಅಡಿಯಲ್ಲಿ ವಿವಿಧ ಜಾತಿ ಮತ್ತು ಧರ್ಮಕ್ಕೆ ಸೇರಿದ 3,003 ಜೋಡಿಗಳು ಹಸೆಮಣೆ ಏರಿದ್ದರು. ವರನಿಗೆ ಸರ್ಕಾರ ರೂ. 10,000 ನೀಡಿದ್ದರೆ, ವಧುವಿನ ಖಾತೆಗೆ 65,000 ನಗದು ಜಮಾ ಮಾಡಿತ್ತು. ಗಾಜಿಯಾಬಾದ್‌ನ ನೆಹರೂ ಪಾರ್ಕ್‌ನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ರಾಜ್ಯ ಸಚಿವ ಅನಿಲ್ ರಾಜ್‌ಭರ್ ಮತ್ತು ಕೇಂದ್ರದ ರಾಜ್ಯ ಖಾತೆ ಸಚಿವ ಜನರಲ್ ವಿಕೆ ಸಿಂಗ್ ಭಾಗವಹಿಸಿದ್ದರು.
ಈ 3,003 ಜೋಡಿಗಳಲ್ಲಿ 1,654 ಜೋಡಿಗಳು ಗಾಜಿಯಾಬಾದ್‌ನಿಂದ, 794 ಹಪುಡ್‌ನಿಂದ ಮತ್ತು 555 ಬುಲಂದ್ಶಹರ್ನಿಂದ ಬಂದಿದ್ದರು. 1,147 ಮುಸ್ಲಿಂ ಮತ್ತು 1,850 ಹಿಂದೂ ಸೇರಿದಂತೆ ಸಿಖ್ ಮತ್ತು ಬೌದ್ಧ ಧರ್ಮಕ್ಕೆ ಸೇರಿದ ಜೋಡಿಗಳೇ ಇದ್ದರು. ಸಾಮೂಹಿಕ ವಿವಾಹದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಾರ್ಮಿಕ ಸಚಿವ ಅನಿಲ್ ರಾಜ್ ಭರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಿಂದ ಬಡವರಿಗಾಗಿ ಮುಂದಿನ ದಿನಮಾನಗಳಲ್ಲಿ ಇದೇ ರೀತಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುತ್ತದೆ ಎಂದಿದ್ದರು.
ಇದನ್ನೂ ಓದಿ: ಹೆಂಡತಿಯೊಂದಿಗೆ ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮದುವೆಯಾದ!