ಮಂಡಿ(ಹಿ.ಪ್ರ): ಇತ್ತೀಚಿನ ದಿನಗಳಲ್ಲಿ ಗೋವಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚಳವಾಗುತ್ತಿದ್ದು, ವ್ಯವಹಾರ ಸಹ ಏರಿಕೆಯಾಗಿದೆ. ಅಲ್ಲದೆ ಹಸುವಿನ ಸಗಣಿಯಿಂದ ಹತ್ತು ಹಲವು ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಆದರೆ ಈ ಸಾಲಿಗೀಗ ಸಗಣಿಯಿಂದ ಮಾಡಲಾಗಿರುವ ಮಾಸ್ಕ್ ಸಹ ಸೇರಿಕೊಂಡಿದೆ. ಕೋವಿಡ್ ವಿರುದ್ಧ ಹೋರಾಡಲು ಈ ಮಾಸ್ಕ್ ತಯಾರಿಸಲಾಗಿದ್ದು, ಬಳಸಿ ಬಿಸಾಡಿದ ಬಳಿಕ ಇದು ಭೂಮಿಯಲ್ಲಿ ಸಂಪೂರ್ಣವಾಗಿ ಕರಗಲಿದೆ.
ವೈದಿಕ್ ಪ್ಲಾಸ್ಟರ್ ಎಂಬ ಸಂಸ್ಥೆಯು ಈ ಸಗಣಿ ಮಾಸ್ಕ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಣ್ಣ ಕಾಶಿ ಎಂದು ಕರೆಯಲ್ಪಡುವ ಮಂಡಿ ಜಿಲ್ಲೆಯಲ್ಲಿ ಎಂಎಸ್ಎಂಇ ರಾಷ್ಟ್ರೀಯ ಕಾಮಧೇನು ಆಯೋಗದ ಸೂಚನೆಯ ಮೇರೆಗೆ ಗೋವಿನ ಸಗಣಿಯಿಂದ ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದೆ.
ಈ ಸಂಸ್ಥೆಯು ಸಗಣಿಯಿಂದ ಮಾಡಿದ ದೀಪ, ಧೂಪದ ಕಡ್ಡಿ ಸೇರಿ ಸಗಣಿಯಿಂದ ಮಾಡಿರುವ ಮಾಸ್ಕ್ ಅನ್ನೂ ಪರಿಚಯಿಸಿದೆ. ಈ ಮಾಸ್ಕ್ ಅನ್ನು ಸಗಣಿ, ಹತ್ತಿ ಬಟ್ಟೆ, ಕಾಗದ ಮಿಶ್ರಣದಿಂದ ತಯಾರಿಸಿದೆ. ಇದು ಪರಿಸರ ಸ್ನೇಹಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ವೇದಿಕ್ ಪ್ಲಾಸ್ಟರ್ ಸಂಸ್ಥೆಯ ವಿತರಕ ಕರಣ್ ಸಿಂಗ್ ಈ ಕುರಿತು ಮಾತನಾಡಿ, ಈ ಮಾಸ್ಕ್ಗಳಲ್ಲಿ ತರಕಾರಿ ಬೀಜಗಳನ್ನು ಸಹ ಸೇರಿಸಲಾಗಿದೆ. ಬಳಸಿದ ಬಳಿಕ ಇದನ್ನು ಹಾಗೆಯೇ ಎಸೆಯಬಹುದು, ಇದರಿಂದಾಗಿ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ. ಇನ್ನೂ ಈ ಮುಖವಾಡಗಳ ತಯಾರಿಕೆಗಾಗಿ ಬೇಕಾದ ಅಗತ್ಯ ಕಚ್ಚಾ ವಸ್ತುಗಳನ್ನು ರಾಷ್ಟ್ರೀಯ ಕಾಮಧೇನು ಆಯೋಗ ಒದಗಿಸುತ್ತದೆ. ಇದನ್ನು ಶೇ.20ರಷ್ಟು ಹತ್ತಿ ಬಟ್ಟೆ ಮತ್ತು ಶೇ.80ರಷ್ಟು ಸಂಸ್ಕರಿಸಿದ ಸಗಣಿ ಬಳಸಿ ತಯಾರಿಸಲಾಗುತ್ತದೆ ಎಂದಿದ್ದಾರೆ.
ಮಂಡಿ ಪಟ್ಟಣಕ್ಕೆ ಹೊಂದಿಕೊಂಡಿರುವ ಕೋಟ್ಲಿ ಗ್ರಾಮಪಂಚಾಯತ್ ಭಾಗದಲ್ಲಿ ಏಕ್ತಾ ಸ್ವ-ಸಹಾಯ ಗುಂಪಿನ ಮಹಿಳೆಯರು, ಈ ಮಾಸ್ಕ್ ಕತ್ತರಿಸಿ ಹೊಲಿಯುವ ಮೂಲಕ ಆಕಾರ ನೀಡುತ್ತಾರೆ. ಆದರೆ ಮಾಸ್ಕ್ ಅನ್ನು ಕಿವಿಗೆ ಕಟ್ಟಲು ಸೆಣಬಿನ ದಾರವನ್ನು ಬಳಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.