ನೀಲಗಿರಿ (ತಮಿಳುನಾಡು): ಟಿ-23(ಹುಲಿ) ಅನ್ನು ಕೊಲ್ಲಲು ತಮಿಳುನಾಡಿನ ಮುಖ್ಯ ವನ್ಯಜೀವಿ ವಾರ್ಡನ್ ಶೇಖರ್ ಕುಮಾರ್ ನೀರಜ್ ಅವರು ಆದೇಶ ಹೊರಡಿಸಿ ನಾಲ್ಕು ದಿನಗಳಾದರೂ ಯಾವುದೇ ಫಲಿತಾಂಶ ಕಂಡು ಬಂದಿಲ್ಲ. ಇನ್ನು, ಕಳೆದ ಒಂಬತ್ತು ದಿನಗಳಿಂದ ಈ ಹುಲಿಗಾಗಿ ಶೋಧ ಮುಂದುವರಿದಿದ್ದರೂ ಈವರೆಗೂ ಹುಲಿ ಪತ್ತೆಯಾಗಿಲ್ಲ.
ನಿನ್ನೆ ನಡೆದ ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಮಹತ್ವದ ಫಲಿತಾಂಶ ಕಂಡು ಬಂದಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅದು ಯಾರಿಗೂ ಕಾಣದಂತೆ ಅವಿತು ಕುಳಿತಿದೆ.
ಮೊಟ್ಟ ಮೊದಲ ಬಾರಿಗೆ ಹುಲಿ ಇರುವ ಸ್ಥಳವನ್ನು ಕಂಡು ಹಿಡಿಯಲು ಸ್ನಿಫರ್ ನಾಯಿಯನ್ನು ಬಳಸಲಾಗುತ್ತಿದೆ. ಈ ಕಾರ್ಯಾಚರಣೆಗಾಗಿ ವಿಶೇಷ ತರಬೇತಿ ಪಡೆದ ನಾಲ್ಕು ಎಲೈಟ್ ತಂಡಗಳು ಕೊಯಮತ್ತೂರಿನಿಂದ ಮುದುಮಲೈಗೆ ಬಂದಿವೆ.
ಇದರ ನಡುವೆ ಹುಲಿಯನ್ನು ಹೊಡೆದುರುಳಿಸಲು ಹೊರಡಿಸಿದ ಆದೇಶದ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ವನ್ಯಜೀವಿ ವಾರ್ಡನ್, ಹುಲಿಯನ್ನು ಶಮನಗೊಳಿಸಲು ಹಾಗೂ ಅದನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅರಣ್ಯ ಇಲಾಖೆಗೆ ಹುಲಿಯನ್ನು ಕೊಲ್ಲುವ ಉದ್ದೇಶವಿಲ್ಲ. ಎರಡು ದಿನಗಳಲ್ಲಿ ಆ ಹುಲಿಯನ್ನು ಹಿಡಿಯಲಾಗುವುದು ಎಂದು ಹೇಳಿದ್ದಾರೆ.
ನಾಲ್ಕು ಜನರ ರಕ್ತ ಹೀರಿದ ಹುಲಿ : ಮಸಿನಗುಡಿಯಲ್ಲಿ ಈ ಹುಲಿ ನಾಲ್ಕು ಜನರನ್ನು ಕೊಂದ ನಂತರ ಜನರಿಂದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಈ ಎಲ್ಲಾ ಕಾರಣದಿಂದ ತಮಿಳುನಾಡಿನ ಮುಖ್ಯ ವನ್ಯಜೀವಿ ವಾರ್ಡನ್ ಶೇಖರ್ ಕುಮಾರ್ ನೀರಜ್ ಅವರು T23 (ಹುಲಿ) ಅನ್ನು ಬೇಟೆಯಾಡಲು ಆದೇಶ ಹೊರಡಿಸಿದ್ದಾರೆ. ಈ ಆದೇಶ ಹೊರಡಿಸಿದ ನಂತರ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಹುಲಿ ದಾಳಿ ಜುಲೈನಿಂದಲೇ ಆರಂಭವಾಗಿದೆ ಎಂದು ಅರಣ್ಯ ಇಲಾಖೆ ತಿಳಿದುಕೊಂಡಿದೆ. 10-11 ವರ್ಷ ವಯಸ್ಸಿನ ಗಂಡು ಹುಲಿ ಇತರ ಹುಲಿಗಳೊಂದಿಗಿನ ಪ್ರಾದೇಶಿಕ ಹೋರಾಟದಲ್ಲಿ ಗಾಯಗೊಂಡಿದೆ. ಇದು ದಾರಿ ತಪ್ಪಿದ್ದು, ಸುಲಭವಾಗಿ ಬೇಟೆಯನ್ನು ಹುಡುಕುತ್ತಿದೆ. ಈ ಹುಲಿ ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಅಪಾಯಕಾರಿಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಗೂಡಲೂರು ಅರಣ್ಯ ಕಚೇರಿ ಮತ್ತು ನೀಲಗಿರಿ ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಗಳನ್ನು ಕೂಲಂಕಷವಾಗಿ ಪರಿಗಣಿಸಿದ ನಂತರ, ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸೆಕ್ಷನ್ 11ರ ಅಡಿಯಲ್ಲಿ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ನೀಡಲಾದ ನಿಬಂಧನೆಗಳ ಅಡಿಯಲ್ಲಿ ಸಮಸ್ಯಾತ್ಮಕ ಹುಲಿಯನ್ನು ಸೆರೆ ಹಿಡಿಯಲು ಮುಖ್ಯ ವನ್ಯಜೀವಿ ವಾರ್ಡನ್ ಆದೇಶ ಹೊರಡಿಸಿದ್ದಾರೆ.