ನವದೆಹಲಿ: ರಾಜ್ಯಸಭೆಯಲ್ಲಿ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ಕಿತ್ತಾಟ ವಿಚಾರವಾಗಿ ಮಾರ್ಷಲ್ಗಳು, ರಾಜ್ಯಸಭಾ ಕಾರ್ಯಾಲಯ ಹಾಗೂ ಭದ್ರತಾ ಸೇವೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಮಾರ್ಷಲ್ ರಾಕೇಶ್ ನೇಗಿ ಈ ಪತ್ರ ಬರೆದಿದ್ದು, ವಿಪಕ್ಷದ ಸದಸ್ಯರು ಸದನದ ಬಾವಿಯಲ್ಲಿದ್ದಾಗ ರಾಜ್ಯಸಭಾಧ್ಯಕ್ಷರ ಸುತ್ತಲೂ ನಾವು ಭದ್ರಕೋಟೆ ರಚಿಸಿದೆವು. ಈ ವೇಳೆ ಸಂಸದರಾದ ಎಲಮಾರನ್ ಕರೀಂ ಮತ್ತು ಅನಿಲ್ ದೇಸಾಯಿ ಭದ್ರತಾ ಸಿಬ್ಬಂದಿ ಪಕ್ಕಕ್ಕೆ ಸರಿಸಲು ಯತ್ನಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಎಲಾಮರನ್ ಕರೀಂ ನನ್ನನ್ನು ಸೆಕ್ಯೂರಿಟಿ ಕಾರ್ಡನ್ ಸರಪಳಿಯಿಂದ ಹೊರಗೆಳೆಯಲು ಯತ್ನಿಸಿದ್ದು, ನನ್ನ ಕುತ್ತಿಗೆಗೆ ಕೈ ಹಾಕಿದ್ರು. ಕ್ಷಣಕಾಲ ನನ್ನ ಉಸಿರು ನಿಂತಂತಾಯಿತು ಎಂದು ವಿವರಿಸಿದ್ದಾರೆ.
ಮತ್ತೊಬ್ಬ ಮಹಿಳಾ ಮಾರ್ಷಲ್ ಅಕ್ಷಿತಾ ಭಟ್ ಪತ್ರದಲ್ಲಿ ಗಲಭೆಯ ಸಮಯದಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿದ್ದಾರೆ. ರಾಜ್ಯಸಭಾಧ್ಯಕ್ಷರ ಬಳಿ ಬಾರದಂತೆ ನಾನು ತಡೆದಾಗ ಸಂಸದೆಯರಾದ ಛಾಯಾ ವರ್ಮಾ ಮತ್ತು ಫುಲೋದೇವಿ ನೇತಮ್ ನನ್ನನ್ನು ಪಕ್ಕಕ್ಕೆ ಸರಿಸಿದರು. ಇತರ ಸಂಸದರು ಭದ್ರತಾ ವಲಯ ಭೇದಿಸಿ ಟೇಬಲ್ ಬಳಿ ತೆರಳಲು ಅವಕಾಶ ಮಾಡಿಕೊಟ್ಟರು ಎಂದು ಬರೆದಿದ್ದಾರೆ.
ಆಗಸ್ಟ್ 11 ರಂದು ರಾಜ್ಯಸಭೆಯಲ್ಲಿ ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ವಿಧೇಯಕ 2021 ರ ವಿಚಾರವಾಗಿ ಪ್ರತಿಪಕ್ಷ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ನಡುವೆ ಗಲಭೆ ನಡೆದಿದೆ ಎನ್ನಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಸಂಸದೆಯರ ಮೇಲೆ ಹಲ್ಲೆ ನಡೆಸಲಾಗಿದೆ.
ಸಂಸದರನ್ನು ನಿಯಂತ್ರಿಸಲು ಹೊರಗಿನಿಂದ 40 ಕ್ಕೂ ಹೆಚ್ಚು ಜನರನ್ನು ಸದನಕ್ಕೆ ಹೊರಗಿನಿಂದ ಕರೆ ತರಲಾಗಿದೆ ಎಂದು ಆರೋಪಿಸಿದರು. ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಸಂಸದರ ಮೇಲೆ ಹಲ್ಲೆ ಮಾಡಿದ್ದನ್ನು ನೋಡಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ: ಹಲೋ.. I am..ಶರದ್ ಪವಾರ್: NCP ಮುಖ್ಯಸ್ಥನ ಹೆಸರಲ್ಲಿ ಬಂದ ಆ ಕರೆ ಯಾವ್ದು?
ಈ ಆರೋಪಗಳಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಘಟನೆಯ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಮಾರ್ಷಲ್ಗಳು ಸದನದ ಬಾವಿಯನ್ನು ಸುತ್ತವರಿದಿದ್ದಾರೆ. ಆದರೂ, ಸಂಸದರು ಅವರನ್ನು ಪಕ್ಕಕ್ಕೆ ಎಳೆದು ಸಭಾಧ್ಯಕ್ಷರತ್ತ ಮುನ್ನುಗ್ಗಿದ್ದಾರೆ.