ಪಲಮು(ಜಾರ್ಖಂಡ್): ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆಯಾಗಲು ಅನುಮತಿ ನಿರಾಕರಣೆ ಮಾಡಿದ್ದಕ್ಕಾಗಿ ವಿವಾಹಿತ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಂಡ್ನ ಪಲಮು ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಗರ್ಹ್ವಾದ ರಾಮಕಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತದೇಹವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮೃತರನ್ನು ಕಿರಣ್ ದೇವಿ ಎಂದು ಗುರುತಿಸಲಾಗಿದ್ದು, ಇವರು ರಾಮಕಂಡ ನಿವಾಸಿ ಎಂದು ತಿಳಿದು ಬಂದಿದೆ.
ಎಸ್ಡಿಪಿಒ ಸುದರ್ಶನ್ ನೀಡಿರುವ ಮಾಹಿತಿ ಪ್ರಕಾರ, ಕಿರಣ್ ಮೂರು ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದಳು. ಆದರೆ, ಅದಕ್ಕೂ ಮೊದಲಿನಿಂದಲೂ ಬೇರೆ ವ್ಯಕ್ತಿ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆಗಸ್ಟ್ 16ರಂದು ರಾತ್ರಿ ಕಿರಣ್ ಪ್ರಿಯಕರ ಮಹೇಶ್ ಭೇಟಿಯಾಗಲು ಹೋದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದರು. ಈ ವೇಳೆ ಮಹೇಶ್ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.
ಇದನ್ನೂ ಓದಿ: ಪಕ್ಕದ ಜಮೀನು ಮಾಲೀಕರಿಂದ ಪೊಲೀಸ್ ಕೇಸ್.. ಸರ್ಕಾರಿ ನೌಕರಿ ಸಿಗಲ್ಲವೆಂದು ವಿವಾಹಿತೆ ಆತ್ಮಹತ್ಯೆ
ಕಿರಣ್ ಮನೆಯಲ್ಲಿ ಬಿಟ್ಟು ಹೋಗಿದ್ದ ಬೈಕ್ ತೆಗೆದುಕೊಳ್ಳಲು ಮರುದಿನ ಬೆಳಗ್ಗೆ ಬಂದಾಗ ಗ್ರಾಮಸ್ಥರು ಇಬ್ಬರನ್ನು ಕಟ್ಟಿ ಹಾಕಿ ಥಳಿಸಿದ್ದರು. ಇದಾದ ಬಳಿಕ ಕಿರಣ್ ಪತಿ ಆಕೆಯನ್ನು ಪತ್ನಿಯನ್ನಾಗಿ ಸ್ವೀಕರಿಸಲು ನಿರಾಕರಿಸಿದ್ದರಿಂದ ಆಗಸ್ಟ್ 19ರಂದು ಮನೆ ಬಿಟ್ಟು ಹೋಗುವಂತೆ ಒತ್ತಾಯಿಸಿದ್ದನು. ಇದಾದ ಬಳಿಕ ನೇರವಾಗಿ ಲವರ್ ಮಹೇಶ್ ಮನೆಗೆ ಹೋಗಿದ್ದಾಳೆ. ಕಿರಣ್ ಅನ್ಯಜಾತಿಯವಳಾಗಿದ್ದರಿಂದ ಮಹೇಶ್ ಕುಟುಂಬಸ್ಥರು ಆಕೆಯನ್ನು ಒಪ್ಪಿಕೊಂಡಿಲ್ಲ. ಹೀಗಾಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.