ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ಪತಿ ಮತ್ತು ಪತ್ನಿ ಹಾಗೂ ಐದು ವರ್ಷದ ಬಾಲಕಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ. ಈ ದಂಪತಿ ಮೊದಲಿಗೆ ತಮ್ಮ ಮಗಳನ್ನು ಕೊಂದು ನಂತರ ತಾವೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇಲ್ಲಿನ ಸತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ವಾಲ್ಡಗಾಂವ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ಇಂದು ಬೆಳಕಿಗೆ ಬಂದಿದೆ. ಮೃತರನ್ನು ಮೋಹನ್ ಪ್ರತಾಪ್ ಸಿಂಗ್ ದಂಗರ್ (30), ಪತ್ನಿ ಪೂಜಾ ದಂಗರ್ (25) ಮತ್ತು ಇವರ ಐದು ವರ್ಷದ ಪುತ್ರಿ ಎಂದು ಗುರುತಿಸಲಾಗಿದೆ. ಕೃಷಿ ಮಾಡುತ್ತಿದ್ದ ಮೋಹನ್ ತಮ್ಮ ಕುಟುಂಬ ಸಮೇತವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: ಸ್ನೇಹಿತೆಯನ್ನು ತಬ್ಬಿಕೊಂಡೇ ಗುಂಡಿಕ್ಕಿ, ತಾನೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ!
ಗುರುವಾರ ಎಲ್ಲರೂ ಊಟ ಮಾಡಿ ಮಲಗಿದ್ದರು. ಪೂಜಾ ಅವರ ಸೋದರ ಸಂಬಂಧಿ ಸಹ ಇಲ್ಲೇ ಸಮೀಪದಲ್ಲಿ ವಾಸವಾಗಿದ್ದರು. ಪ್ರತಿ ನಿತ್ಯ ಬೆಳಗ್ಗೆ ಮಗಳು ಅವರ ಮನೆಗೆ ಹೋಗುತ್ತಿದ್ದಳು. ಆದರೆ, ಶುಕ್ರವಾರ ಬೆಳಗ್ಗೆ ಬಾಲಕಿ ಬಾರದೇ ಇದ್ದಾಗ ಅಜ್ಜಿಯೇ ಪೂಜಾ ಮನೆಗೆ ಬಂದಿದ್ದರು. ಈ ವೇಳೆ ಮೂವರು ಸಹ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ನಂತರ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಸತಾರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಸದ್ಯಕ್ಕೆ ಮೋಹನ್ ಮತ್ತು ಪೂಜಾ ದಂಪತಿಯು ನಿರ್ಧಾರಕ್ಕೆ ಕಾರಣವೇನು ಎಂಬುವುದು ಗೊತ್ತಾಗಿಲ್ಲ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಒಡಿಶಾದ ಘಟನೆಯ ನೆನಪು: ಕಳೆದ ದಿನಗಳ ಹಿಂದೆ ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲೂ ಇಂತಹದ್ದೆ ಘಟನೆಯೊಂದು ಬೆಳಕಿಗೆ ಬಂದಿತ್ತು. ಕಳೆದ ಒಂದು ವಾರದಿಂದ ಬೀಗ ಹಾಕಲಾಗಿದ್ದ ಮನೆಯಲ್ಲಿ ವಿಧವೆ ಮತ್ತು ಆಕೆಯ ಇಬ್ಬರು ಪುಟ್ಟ ಮಕ್ಕಳು ಮೃತದೇಹಗಳು ಅನುಮಾನಾಸ್ಪದವಾಗಿ ಪತ್ತೆಯಾಗಿದ್ದವು. 32 ವರ್ಷದ ಸಾಜಿಯಾ ಪರ್ವೀನ್ ತನ್ನ 9 ವರ್ಷದ ಮಗ ಹಾಗೂ 7 ವರ್ಷದ ಮಗಳೊಂದಿಗೆ ವಾಸವಾಗಿದ್ದರು. ಆದರೆ, ಆರೇಳು ದಿನಗಳಿಂದ ಮನೆ ಬೀಗ ಹಾಕಲಾಗಿತ್ತು. ಕಳೆದ ಶನಿವಾರ ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂತೆಯೇ, ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಮುರಿದು ಒಳಗಡೆ ಹೋಗಾದ ಮೂವರ ಶವವಾಗಿ ಪತ್ತೆಯಾಗಿದ್ದರು. ಈ ತಾಯಿ ಮತ್ತು ಮಕ್ಕಳ ಸಾವಿಗೆ ನಿಖರ ಕಾರಣ ಸಹ ಗೊತ್ತಾಗಿರಲಿಲ್ಲ.
ಮೃತ ಸಾಜಿಯಾ ಪತಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರ ನಡುವೆ ವಿಧವೆಯಾಗಿದ್ದ ಆಕೆಯ ಮನೆಗೆ ಯುವಕನೊಬ್ಬ ಹಲವಾರು ಬಾರಿ ಭೇಟಿ ನೀಡುತ್ತಿದ್ದ. ಆದರೆ, ಆತ ಕೂಡ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಈ ಮೂವರ ಸಾವಿನ ಹಿಂದೆ ಯಾರದ್ದೋ ಕೈವಾಡ ಇರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬೀಗ ಹಾಕಿದ್ದ ಮನೆಯಲ್ಲಿ ವಿಧವೆ, ಇಬ್ಬರು ಮಕ್ಕಳ ಮೃತದೇಹಗಳು ಪತ್ತೆ