ಹಲ್ದ್ವಾನಿ(ಉತ್ತರಾಖಂಡ): ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡ್ತಾರೆ. ಅದೇ ಮದುವೆ ಮುರಿಯಲು ಸಣ್ಣ ಕಾರಣ ಸಾಕು. ಉತ್ತರಾಖಂಡದ ಹಲ್ದ್ವಾನಿಯಲ್ಲಿ ಧರಿಸುವ ಬಟ್ಟೆಗಾಗಿ ಮದುವೆಯನ್ನೇ ರದ್ದು ಮಾಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ವಧುವಿಗೆ, ವರನ ಕಡೆಯಿಂದ ಕಳುಹಿಸಲಾದ ಲೆಹಂಗಾ ಸರಿ ಇಲ್ಲ ಎಂಬ ಕಾರಣಕ್ಕಾಗಿ ವಧು ಮದುವೆಯನ್ನೇ ಒಲ್ಲೆ ಎಂದಿದ್ದಾಳೆ. ಬಳಿಕ ಉಭಯ ಕುಟುಂಬಸ್ಥರ ಮಧ್ಯೆ ಸಂಧಾನ ನಡೆದು ವಧುವಿನ ಕಡೆಯಿಂದ ದಂಡ ಕಟ್ಟಿಸಿದ ಬಳಿಕ ಮದುವೆ ಬಿಕ್ಕಟ್ಟು ಅಂತ್ಯಗೊಂಡಿದೆ.
ಏನಾಯ್ತು?: ನವೆಂಬರ್ 5 ರಂದು ಹಲ್ದ್ವಾನಿಯ ಯುವಕ- ಯುವತಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಜೂನ್ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದಿತ್ತು. ವರನ ಕಡೆಯಿಂದ ವಧುವಿಗೆ ಕೊಡಿಸಬೇಕಿದ್ದ ದಿರಿಸಿನಲ್ಲಿ ಲೆಹಂಗಾವನ್ನು ಕೊಡಲಾಗಿತ್ತು. ಇದನ್ನು ಪಡೆದ ವಧು ಲೆಹಂಗಾ ಸರಿ ಇಲ್ಲ ಎಂದು ತಗಾದೆ ತೆಗೆದಿದ್ದಾಳೆ. ಬಳಿಕ ಮದುವೆಯನ್ನೇ ಒಲ್ಲೆ ಎಂದಿದ್ದಾಳೆ.
ಇದು ವರನ ಕಡೆಯವರಿಗೆ ಗೊತ್ತಾಗಿ ಅಚ್ಚರಿಗೊಂಡಿದ್ದಾರೆ. 10 ಸಾವಿರ ರೂಪಾಯಿ ನೀಡಿ ಖರೀದಿಸಿದ್ದ ಲೆಹಂಗಾಗೆ ವಧು ಆಕ್ಷೇಪಿಸಿದ್ದು, ಕೋಪಕ್ಕೆ ಕಾರಣವಾಗಿದೆ. ಬಳಿಕ ಉಭಯ ಗುಂಪುಗಳ ಮಧ್ಯೆ ಸಂಧಾನ ನಡೆಸಲಾಗಿದೆ. ಈ ವೇಳೆ ಭಾರಿ ವಾಗ್ವಾದ ಸಹ ನಡೆದು ಕಿತ್ತಾಟಕ್ಕೂ ಕಾರಣವಾಗಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಲೆಹಂಗಾ ಜಗಳ: ಸಂಧಾನದ ವೇಳೆ ಎರಡೂ ಕುಟುಂಬಗಳ ಮಧ್ಯೆ ಕಿತ್ತಾಟ ಶುರುವಾಗಿದೆ. ಬಳಿಕ ಇದು ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಶಾಂತಿ ಸಂಧಾನ ಮಾಡಲು ಬಂದ ಪೊಲೀಸರ ಮುಂದೆಯೂ ಕಿತ್ತಾಟ ನಿಂತಿಲ್ಲ. ಇದರಿಂದ ಗದರಿದ ಪೊಲೀಸರು ಇಬ್ಬರನ್ನೂ ಶಾಂತಿ ಭಂಗ ಆರೋಪದಡಿ ಜೈಲಿಗೆ ಅಟ್ಟುವ ಎಚ್ಚರಿಕೆ ನೀಡಿದ್ದಾರೆ.
ಸುದೀರ್ಘ ವಾಗ್ದಾದದ ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಂಗಳವಾರ ತಡರಾತ್ರಿಯವರೆಗೆ ಚರ್ಚೆ ನಡೆದು ಇತ್ಯರ್ಥಕ್ಕೆ ಬರಲಾಗಿದೆ. ಅದರಂತೆ ಯುವತಿಯ ಕಡೆಯವರು ವರನಿಗೆ 1 ಲಕ್ಷ ರೂಪಾಯಿ ದಂಡ ನೀಡಲು ಸೂಚಿಸಲಾಗಿದೆ. ಇದಕ್ಕೊಪ್ಪಿದ್ದ ವಧುವಿನ ಕಡೆಯವರು ಮದುವೆಯನ್ನು ಮುರಿದುಕೊಂಡಿದ್ದಾರೆ.