ಬಿಜಾಪುರ (ಛತ್ತೀಸ್ಗಢ): ರಜೆ ಮೇಲೆ ಊರಿಗೆ ಬಂದಿದ್ದ ಪೊಲೀಸ್ ಕಾನ್ಸ್ಟೇಬಲ್ವೊಬ್ಬರನ್ನು ನಕ್ಸಲರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. ಬೈಕ್‌ನಲ್ಲಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ನಕ್ಸಲರು ಅಪಹರಿಸಿ ಕೊಲೆಗೈದು ನಂತರ ಶವವನ್ನು ರಸ್ತೆಯಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧ್ರಾಮ್ ಅವಲಂ ಹತ್ಯೆಯಾದ ಪೊಲೀಸ್ ಕಾನ್‌ಸ್ಟೇಬಲ್. ಟೋಯ್ನಾರ್‌ನಲ್ಲಿ ಸಹಾಯಕ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ವಹಿಸುತ್ತಿದ್ದ ಇವರು ರಜೆಯಲ್ಲಿ ತಮ್ಮ ಸ್ವಗ್ರಾಮ ಜಂಗ್ಲಾಗೆ ತೆರಳಿದ್ದರು. ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ದುವಾಲಿಪಾರ ಗ್ರಾಮದ ಸಮೀಪ ಮೃತದೇಹ ಸಿಕ್ಕಿದೆ ಎಂದು ಎಎಸ್‌ಪಿ ಚಂದ್ರಕಾಂತ್ ಗೋವರ್ಣ ಮಾಹಿತಿ ನೀಡಿದರು.
ಬುಧವಾರ, ಆಗಸ್ಟ್ 30ರಂದು ಬುಧ್ರಾಮ್, ತಮ್ಮ ಸೋದರಳಿಯನನ್ನು ದುವಾಲಿಪಾರಾಕ್ಕೆ ಬಿಡಲು ಬೈಕ್ ಮೇಲೆ ತೆರಳಿದ್ದರು. ಅಲ್ಲಿಂದ ವಾಪಸಾಗುತ್ತಿದ್ದಾಗ ನಕ್ಸಲರು ಹೊಂಚು ಹಾಕಿ ತಡೆದಿದ್ದಾರೆ. ಬಳಿಕ ಅಪಹರಿಸಿ ಕಾಡಿಗೆ ಕರೆದೊಯ್ದ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಶವವನ್ನು ರಸ್ತೆಗೆ ತಂದು ಎಸೆದಿದ್ದಾರೆ. ರಕ್ತದಲ್ಲಿ ತೋಯ್ದ ಶವವನ್ನು ಕಂಡ ಗ್ರಾಮಸ್ಥರು ಗಂಗಾಲೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: 15 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮಹಿಳೆ ಪೊಲೀಸರಿಗೆ ಶರಣು
ಪೊಲೀಸ್ ಮಾಹಿತಿದಾರರೆಂದು ಭಾವಿಸಿ ಓರ್ವನ ಹತ್ಯೆ: ಛತ್ತೀಸ್ಗಢದಲ್ಲಿ ಇನ್ನೂ ಕೆಲವು ಪ್ರದೇಶಗಳು ನಕ್ಸಲ್‌ಪೀಡಿತವಾಗಿವೆ. ಕಳೆದ ಏಪ್ರಿಲ್ನಲ್ಲಿ ಬಸ್ತಾರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರರು ಎಂಬ ಶಂಕೆಯ ಮೇಲೆ ಮೂವರು ವ್ಯಾಪಾರಿಗಳಿಗೆ ದೊಣ್ಣೆಗಳಿಂದ ಥಳಿಸಿದ್ದರು. ಪರಿಣಾಮ, ದೋರ್ನಪಾಲ್ ಗ್ರಾಮದ ವ್ಯಾಪಾರಿ ಪ್ರದೀಪ್ ಬಘೇಲ್ ಸಾವಿಗೀಡಾದರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಪ್ರದೀಪ್ ಬಘೇಲ್ ಹಾಗೂ ಪ್ರಧಾನ್ ಸುನಾನಿ, ಗೋಪಾಲ್ ಬಾಘೇಲ್ ಎಂಬವರು ದಿನಸಿ ಮತ್ತು ಇತರ ಸಾಮಗ್ರಿಗಳೊಂದಿಗೆ ವ್ಯಾಪಾರ ಮಾಡಲು ಬೈಕ್ಗಳಲ್ಲಿ ಪಾಲಮಡ್ಗು ಪ್ರದೇಶಕ್ಕೆ ತೆರಳಿದ್ದರು. ಇಲ್ಲಿನ ಕೊನೆಯ ಗ್ರಾಮವಾದ ಕುಮಾರಪರದಲ್ಲಿ ಗ್ರಾಮಸ್ಥರ ವೇಷದಲ್ಲಿದ್ದ ನಲ್ಸಕರು ಈ ವ್ಯಾಪಾರಿಗಳನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಪೊಲೀಸ್ ಮಾಹಿತಿದಾರರು ಎಂದು ಶಂಕಿಸಿ ಸಾಮಗ್ರಿಗಳನ್ನು ಕಸಿದುಕೊಂಡು ದೊಣ್ಣೆಯಿಂದ ದಾಳಿ ಮಾಡಿದ್ದರು. ಬೈಕ್ಗಳಿಗೆ ಬೆಂಕಿ ಹಚ್ಚಿದ್ದರು. ನಕ್ಸಲರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು ಸಹ ಕಾಲ್ನಡಿಗೆಯಲ್ಲಿ ಆಸ್ಪತ್ರೆ ಸೇರಲು ಯತ್ನಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಪ್ರದೀಪ್ ಬಘೇಲ್ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಪೊಲೀಸ್ ಮಾಹಿತಿದಾರರೆಂಬ ಶಂಕೆ: ಮೂವರು ವ್ಯಾಪಾರಿಗಳಿಗೆ ನಕ್ಸಲರಿಂದ ಥಳಿತ, ಓರ್ವ ಸಾವು