ಕಿಶ್ತ್ವಾರ್: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಪ್ರದೇಶದಲ್ಲಿ ಕಾರೊಂದು ಕಂದಕಕ್ಕೆ ಉರುಳಿ ಬಿದ್ದು ನಾಲ್ವರು ಮಹಿಳೆಯರು ಸೇರಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಿಶ್ತ್ವಾರ್‌ನ ಮಾರ್ವಾ ಪ್ರದೇಶದಲ್ಲಿ ಸಂಜೆ 5.30ರ ಸುಮಾರಿಗೆ ಘಟನೆ ನಡೆದಿದೆ. ಈ ಮಾಹಿತಿಯನ್ನು ಕಿಶ್ತ್ವಾರ್ ಉಪ ಆಯುಕ್ತರು ದೃಢಪಡಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಕಿಶ್ತ್ವಾರ್ ಉಪ ಆಯುಕ್ತ ದೇವಾಂಶ್ ಯಾದವ್, ಜಮ್ಮು ವಿಭಾಗದ ಕಿಶ್ತ್ವಾರ್‌ನ ಮಾರ್ವಾ ಪ್ರದೇಶದಲ್ಲಿ ಟಾಟಾ ಸುಮೋ ಕಾರು ನಿಯಂತ್ರಣ ಕಳೆದುಕೊಂಡಿದ್ದು, ಕಂದಕಕ್ಕೆ ಉರುಳಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದು, ಮಾರ್ವಾ ನಿವಾಸಿಗಳು ಎಂದು ಹೇಳಿದರು.
ಮೃತರನ್ನು ಚುಂಜೋರ್ ಮಾರ್ವಾದ ಮೊಹಮ್ಮದ್ ಅಮೀನ್ ಶೇಖ್, ನೌಪಾಚಿ ಮಾರ್ವಾದ ಉಮರ್ ಗನಿ ಶಾ (ಚಾಲಕ), ಕದರ್ನಾ ಮಾರ್ವಾದ ಮೊಹಮ್ಮದ್ ಇರ್ಫಾನ್ ಹಜಾಮ್, ಥಚ್ಚನ ಮಾರ್ವಾದ ನಿವಾಸಿಗಳಾದ ಅಫಕ್ ಅಹ್ಮದ್ ಹಜಾಮ್, ಸಫೂರಾ ಬಾನೋ, ಮುಝಾಮಿಲಾ ಬಾನೋ ಮತ್ತು ಅಂಜರ್‌ನ ಆಸಿಯಾ ಬಾನೋ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬರ ಗುರುತು ಇನ್ನು ಪತ್ತೆಯಾಗಿಲ್ಲ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರತಿಕ್ರಿಯಿಸಿ, ಕಿಶ್ತ್ವಾರ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜನರು ಸಾವನ್ನಪ್ಪಿದ ಬಗ್ಗೆ ತಿಳಿದು ದುಃಖವಾಗಿದೆ. ಅಗಲಿದ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ. ಅಗತ್ಯವಿರುವ ಎಲ್ಲ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಕೇಂದ್ರ ಸಚಿವರು ಸಂತಾಪ: ಅಪಘಾತದ ನಂತರ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಟ್ವೀಟ್ ಮಾಡುವ ಮೂಲಕ ಸಾಧ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದ್ದಾರೆ. ಅವರು ಟ್ವೀಟ್ ಮಾಡಿ, ಮಾರ್ವಾ ಪ್ರದೇಶದಲ್ಲಿ ಟಾಟಾ ಸುಮೋ ರಸ್ತೆ ಅಪಘಾತದ ಸುದ್ದಿ ಕೇಳಿ ನೋವಾಗಿದೆ. ಕಿಶ್ತ್ವಾರ್ ಡಿಸಿ ಡಾ. ದೇವಾಂಶ್ ಯಾದವ್ ಅವರೊಂದಿಗೆ ಮಾತನಾಡಿ ಬೇಕಾದ ಸಹಾಯವನ್ನು ಒದಗಿಸುವಂತೆ ಸೂಚಿಸಿದ್ದೇನೆ. 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಗಲಿದ ಕುಟುಂಬಗಳಿಗೆ ನನ್ನ ಪ್ರಾಮಾಣಿಕ ಸಂತಾಪ ಎಂದು ಹೇಳಿದ್ದಾರೆ.
ಓದಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಹರಿದು ಗರ್ಭಿಣಿ ಸ್ಥಳದಲ್ಲೇ ಸಾವು: ತಾಯಿ ಹೊಟ್ಟೆಯಲ್ಲೇ ಪ್ರಾಣ ಕಳೆದುಕೊಂಡ ಶಿಶು