ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ಹಿಮಪಾತ ದುರಂತ ಸಂಭವಿಸಿದೆ. 40 ಜನ ಪರ್ವತಾರೋಹಿಗಳು ಭಾರಿ ಹಿಮಕುಸಿತದಲ್ಲಿ ಸಿಲುಕಿದ್ದು, ಈವರೆಗೆ 7 ಮೃತದೇಹಗಳು ಪತ್ತೆಯಾಗಿವೆ. 8 ಜನರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಇನ್ನೂ 25 ಜನರು ನಾಪತ್ತೆಯಾಗಿದ್ದಾರೆ.
ಇಲ್ಲಿನ ದ್ರೌಪದಿಯ ದಂಡ-2 ಪ್ರದೇಶಕ್ಕೆ ನೆಹರೂ ಪರ್ವತಾರೋಹಣ ಸಂಸ್ಥೆಯ 40 ಜನ ಪರ್ವತಾರೋಹಿಗಳ ತಂಡ ತೆರಳಿತ್ತು. ಈ ವೇಳೆ ಹಿಮಕುಸಿತ ಉಂಟಾಗಿದೆ. ಪರಿಣಾಮ ಎಲ್ಲ ಪರ್ವತಾರೋಹಿಗಳು ಸಿಲುಕಿದ್ದಾರೆ. ಸ್ಥಳದಲ್ಲಿ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, 7 ಜನ ಮೃತ ದೇಹಗಳು ಪತ್ತೆಯಾಗಿವೆ. ಇದೇ ವೇಳೆ 8 ಮಂದಿಯನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: ಕಂಟೇನರ್ಗೆ ಆಟೋ ರಿಕ್ಷಾ ಡಿಕ್ಕಿ.. 11 ಮಂದಿ ಸಾವು, ನಾಲ್ವರಿಗೆ ಗಂಭೀರ ಗಾಯ
ಎರಡು ಚೀತಾ ಹೆಲಿಕಾಪ್ಟರ್ಗಳ ಬಳಕೆ: ಭಾರತೀಯ ವಾಯುಪಡೆ (ಐಎಎಫ್) ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎರಡು ಚೀತಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಜೊತೆಗೆ ಇತರ ಹೆಲಿಕಾಪ್ಟರ್‌ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತುಕತೆ ನಡೆಸಿದ್ದು, ನೆರವು ನೀಡುವುದಾಗಿ ರಾಜನಾಥ್ ಭರವಸೆ ನೀಡಿದ್ದಾರೆ.
ಸೆಪ್ಟೆಂಬರ್ 22ರಿಂದ ನಡೆಯುತ್ತಿದೆ ತರಬೇತಿ: ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ವತಿಯಿಂದ ಪರ್ವತಾರೋಹಿಗಳಿಗೆ ಸೆಪ್ಟೆಂಬರ್ 22ರಿಂದ ತರಬೇತಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ 97 ಪ್ರಶಿಕ್ಷಣಾರ್ಥಿಗಳು, 24 ತರಬೇತುದಾರರು ಸೇರಿದಂತೆ ಒಟ್ಟು 122 ಜನರು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಸಂಭವಿಸಿದ ಹಿಮಕುಸಿತದಲ್ಲಿ 7 ಪರ್ವತಾರೋಹಣ ಬೋಧಕರು, 34 ಪ್ರಶಿಕ್ಷಣಾರ್ಥಿಗಳು ಮತ್ತು 1 ಶುಶ್ರೂಷಾ ಸಹಾಯಕ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯಾಚರಣೆ ಸ್ಥಗಿತ: ಹಿಮಪಾತದಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯವು ವಿಳಂಬವಾಗುತ್ತಿದೆ. ಜೊತೆಗೆ ನಿರಂತರ ಹಿಮಪಾತದಿಂದಾಗಿ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆಯವರೆಗೆ ಕಾಯಬೇಕಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ: ವರದಿಗಾರರ ನಡತೆ ಪ್ರಮಾಣಪತ್ರ ಕೇಳಿದ ಪೊಲೀಸರು.. ಟೀಕೆ ನಂತರ ಆದೇಶ ವಾಪಸ್