ನವದೆಹಲಿ: ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೋಸ್ ಅವೆನ್ಯೂ ಕೋರ್ಟ್ ಮಾರ್ಚ್ 20 ರವರೆಗೆ ನ್ಯಾಯಂಗ ಬಂಧನಕ್ಕೆ ಕಳುಹಿಸಿದೆ. ಸಿಬಿಐ ಕಸ್ಟಡಿ ಅಂತ್ಯಗೊಂಡ ನಂತರ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
ಸೋಮವಾರ ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ, ಸಿಬಿಐ ವಕೀಲರು ಸದ್ಯಕ್ಕೆ ಸಿಸೋಡಿಯಾ ಅವರನ್ನು ಸಿಬಿಐ ಕಸ್ಟಡಿಗೆ ಕೋರುವುದಿಲ್ಲ ಎಂದು ತಿಳಿಸಿದರು. ಸಿಸೋಡಿಯಾ ಅವರ ವಕೀಲರು ಎತ್ತಿದ ಅಕ್ರಮದ ಆರೋಪಗಳನ್ನು ಸಮರ್ಥಿಸಿಕೊಂಡ ಸಿಬಿಐ, ತನಿಖಾ ಸಂಸ್ಥೆಯು ತನ್ನ ಪ್ರಕ್ರಿಯೆಗಳ ಬಗ್ಗೆ ಪಾರದರ್ಶಕವಾಗಿದೆ ಎಂದು ಹೇಳಿದೆ. ನ್ಯಾಯಂಗ ಬಂಧನದ ಅವಧಿಯಲ್ಲಿ ಮನೀಶ್ ಸಿಸೋಡಿಯಾ ಅವರಿಗೆ ಕನ್ನಡಕ ನೋಟ್ಬುಕ್, ಪೆನ್ನು ಮತ್ತು ಭಗವದ್ ಗೀತೆಯನ್ನು ಕೊಂಡೊಯ್ಯಲು ಕೋರ್ಟ್ ಅನುಮತಿ ನೀಡಿದೆ. ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಔಷಧವನ್ನು ಹೊಂದಲು ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ವಿಪಾಸ್ಸಾನ (ಧ್ಯಾನ) ಸೆಲ್ನಲ್ಲಿ ಇರಿಸಲು ಸಿಸೋಡಿಯಾ ಅವರ ಕೋರಿಕೆ ಪರಿಗಣಿಸುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶಿಸಲಾಗಿದೆ.
ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಎರಡೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಂಕಿತ ಉಗ್ರ
ಸಿಬಿಐ (ಕೇಂದ್ರಾ ತನಿಖಾ ಸಂಸ್ಥೆ) ಫೆಬ್ರವರಿ 26ರಂದು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತ್ತು. ನಂತರ ದೆಹಲಿ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೇಜ್ರಿವಾಲ್ ಕ್ಯಾಬಿನೆಟ್ಗೆ ಸಿಸೋಡಿಯಾ ಅವರು ರಾಜೀನಾಮೆ ನೀಡಿದರು. ಕಳೆದ ನ್ಯಾಯಲಯ ವಿಚಾರಣೆಯಲ್ಲಿ ಸಿಸೋಡಿಯಾ ಅವರು ಸರಿಯಾಗಿ ತನಿಖೆಗೆ ಸ್ಪಂದಿಸುತ್ತಿಲ್ಲ ಎಂದು ಸಿಬಿಐ ದೂರಿತ್ತು. ಮತ್ತೊಂದೆಡೆ ಸುದೀರ್ಘ ಗಂಟೆಗಳ ಕಾಲ ಪುನರಾವರ್ತಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಸಿಸೋಡಿಯಾ ಅವರು ಪ್ರತಿಯಾಗಿ ದೂರಿದ್ದರು.
ಮನವಿಯನ್ನು ಆಲಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್: ಇದಕ್ಕೂ ಮುನ್ನ ಸಿಸೋಡಿಯಾ ಅವರು ಜಾಮೀನು ಕೋರಿ ನ್ಯಾಯಲಯದ ಮೊರೆ ಹೋಗಿದ್ದರು, ತನ್ನನ್ನು ಕಸ್ಟಡಿಯಲ್ಲಿ ಇರಿಸುವುದರಿಂದ ಯಾವುದೇ ‘ಫಲಭ್ರದ’ ಉದ್ದೇಶ ಉಂಟಾಗುವುದಿಲ್ಲ ಎಂದು ಹೇಳಿದ್ದರು. ಸಿಸೋಡಿಯಾ ಅವರು ಸಿಬಿಐ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲ್ಲೆರಿದ್ದರು, ಆದರೆ ಸರ್ವೋಚ್ಛ ನ್ಯಾಯಾಲಯವು ದೆಹಲಿ ಕೋರ್ಟ್ಗೆ ಹೋಗುವಂತೆ ಸಿಸೋಡಿಯಾ ಅವರಿಗೆ ನಿರ್ದೇಶನ ನೀಡಿ ಮನವಿಯನ್ನು ಆಲಿಸಲು ನಿರಾಕರಿಸಿತ್ತು.
ಒಂಬತ್ತು ವಿರೋಧ ಪಕ್ಷದ ನಾಯಕರಿಂದ ಪ್ರಧಾನಿ ಮೋದಿಗೆ ಪತ್ರ: ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಕೇಂದ್ರಿಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷವು ಬಿಜೆಪಿ ವಿರುದ್ಧ ಆರೋಪಿಸುತ್ತಿದೆ. ಬಿಜೆಪಿ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಮುಖ ಪ್ರತಿಪಕ್ಷದ ನಾಯಕರನ್ನು ಕೇಂದ್ರೀಯ ತನಿಖಾ ಏಜೆನ್ಸಿಗಳಿಂದ ತನಿಖೆ ನಡೆಸುತ್ತಿರುವುದು ಹೆಚ್ಚಾಗಿದೆ ಎಂದು ಒಂಬತ್ತು ವಿರೋಧ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಾಸಕರೊಂದಿಗೆ ಕೇಜ್ರಿವಾಲ್ ತುರ್ತು ಸಭೆ: ಸೌರಭ್ ಮತ್ತು ಅತಿಶಿ ಸಚಿವರನ್ನಾಗಿ ಮಾಡಲು ನಿರ್ಧಾರ