ಇಂಫಾಲ್: ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಶನಿವಾರ ಸಂಜೆ ಲಾಂಗೋಲ್ ಗೇಮ್ಸ್ ಗ್ರಾಮದಲ್ಲಿ ಗುಂಪು ಹಲ್ಲೆ ನಡೆಸಿದ್ದರಿಂದ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಸಿಬ್ಬಂದಿ ಹಲವಾರು ಸುತ್ತಿನ ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ತಿಳಿದು ಬಂದಿದೆ. ಹಿಂಸಾಚಾರದ ವೇಳೆ 45 ವರ್ಷದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಅವರ ಎಡತೊಡೆಯ ಮೇಲೆ ಗುಂಡಿನ ಗಾಯಗಳಾಗಿದ್ದು, ಅವರನ್ನು ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS)ಗೆ ದಾಖಲಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಪರಿಸ್ಥಿತಿ ಸುಧಾರಿಸಿದೆ. ಆದರೆ ನಿರ್ಬಂಧಗಳು ಜಾರಿಯಲ್ಲಿವೆ. ಇಂಫಾಲ್ ಪೂರ್ವ ಜಿಲ್ಲೆಯ ಚೆಕಾನ್ ಪ್ರದೇಶದಿಂದ ಹಿಂಸಾಚಾರ ವರದಿಯಾಗಿದೆ. ಅಲ್ಲಿ ಶನಿವಾರ ದೊಡ್ಡ ವಾಣಿಜ್ಯ ಸಂಸ್ಥೆಗೆ ಬೆಂಕಿ ಹಚ್ಚಲಾಗಿದೆ. ಅಕ್ಕಪಕ್ಕದ ಮೂರು ಮನೆಗಳಿಗೂ ಬೆಂಕಿ ಹಚ್ಚಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಮಣಿಪುರ ಉದ್ವಿಗ್ನ’, ಘರ್ಷಣೆಯಲ್ಲಿ ಸೈನಿಕ ಸೇರಿ ಇಬ್ಬರಿಗೆ ಗಾಯ.. ವದಂತಿಗಳಿಗೆ ಕಿವಿಗೊಡಬೇಡಿ ಎಂದ ಪೊಲೀಸರು
ಮೂವರು ಸಾವು: 27 ವಿಧಾನಸಭಾ ಕ್ಷೇತ್ರಗಳ ಸಮನ್ವಯ ಸಮಿತಿಯು ಕರೆ ನೀಡಿದ್ದ 24 ಗಂಟೆಗಳ ಸಾರ್ವತ್ರಿಕ ಮುಷ್ಕರದ ನಡುವೆ ಶನಿವಾರ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಇದು ಇಂಫಾಲ್ ಕಣಿವೆಯಲ್ಲಿ ಸಾಮಾನ್ಯ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಇದಕ್ಕೂ ಮುನ್ನ ಶನಿವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಬಿಷ್ಣುಪುರ ಜಿಲ್ಲೆಯಲ್ಲಿ ಒಬ್ಬ ವೃದ್ಧ ಮತ್ತು ಆತನ ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದರು.
ಬಂದೂಕುಗಳು ಮತ್ತು ಕತ್ತಿಗಳೊಂದಿಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕ್ವಾಕ್ತಾ ಲಂಖೈ ಗ್ರಾಮದ ಮೇಲೆ ದಾಳಿ ನಡೆಸಿದರು. ಮನಸೋಯಿಚ್ಛೆ ಗುಂಡಿನ ದಾಳಿ ನಡೆಸಿದ್ದರಿಂದ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ದಾಳಿಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಇಬ್ಬರು ಗ್ರಾಮಸ್ಥರನ್ನೂ ಉಗ್ರರು ಅಪಹರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ದಾಳಿಯ ಪರಿಣಾಮವಾಗಿ ಗ್ರಾಮದ ಉಳಿದ ನಿವಾಸಿಗಳು ಊರನ್ನು ತೊರೆದಿದ್ದಾರೆ. ಹೆಚ್ಚುವರಿ ಪೊಲೀಸರು ಪ್ರದೇಶಗಳಿಗೆ ಧಾವಿಸಿ ಶವಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಯುಮ್ನಮ್ ಪಿಶಾಕ್ ಮೈತೇಯಿ (67) ಮತ್ತು ಅವರ ಪುತ್ರ ಯುಮ್ನಮ್ ಪ್ರೇಮ್‌ಕುಮಾರ್ ಮೈತೇಯಿ (39) ಮತ್ತು ನೆರೆಹೊರೆಯವರಾದ ಯುಮ್ನಮ್ ಜಿತೇನ್ ಮೈತೇಯಿ (46) ಎಂದು ಗುರುತಿಸಲಾಗಿದೆ.
ಮೇ ತಿಂಗಳಲ್ಲಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೆದ್ದವು. ಕಳೆದ ಮೂರು ತಿಂಗಳಿನಿಂದ ಈವರೆಗೆ 160ಕ್ಕೂ ಹೆಚ್ಚು ಜನರು ಬಲಿ ಆಗಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರಿದ ಪ್ರಕ್ಷುಬ್ಧತೆ.. 20 ಜನರಿಗೆ ಗಾಯ, ಇಂಫಾಲ್ ಕಣಿವೆಯಲ್ಲಿ ಕರ್ಫ್ಯೂ ಜಾರಿ