ಇಂಫಾಲ್ (ಮಣಿಪುರ): ಮಣಿಪುರದ ನಾಗ ಮತ್ತು ಕುಕಿ ಬುಡಕಟ್ಟು ಜನಾಂಗದವರು ಆಯೋಜಿಸಿದ್ದ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ ಸುಮಾರು 54 ಮೃತ ಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದ್ದು, ಮೊಬೈಲ್ ನೆಟ್ವರ್ಕ್ ಸೇರಿದಂತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ಸೇನಾ ಪಡೆಗಳನ್ನು ಮಣಿಪುರದಲ್ಲಿ ನಿಯೋಜಿಸಲಾಗಿತ್ತು. ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಭಾರತೀಯ ಶುಕ್ರವಾರ ತಿಳಿಸಿತ್ತು. ಭಾರತೀಯ ಸೇನೆಯು ಸುಮಾರು 9 ಸಾವಿರ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಈಟಿವಿ ಭಾರತ್ನೊಂದಿಗೆ ಮಣಿಪುರ ಉಕ್ಕಿನ ಮಹಿಳೆ ಎಂದು ಕರೆಯಲ್ಪಡುವ ಶರ್ಮಿಳಾ ಅವರು ಮಾತನಾಡಿ, "ಮಣಿಪುರ ರಾಜ್ಯವು 1947ರಿಂದ ಸಂಕೀರ್ಣವಾದ ಜನಸಂಖ್ಯೆ ಮತ್ತು ಜನಾಂಗೀಯ ಸಮಸ್ಯೆಯಿಂದ ಬಳಲುತ್ತಿದೆ. ಅದು ಈಗಲೂ ಮುಂದುವರೆದಿದೆ. ಈ ಸಮಸ್ಯೆ ಭೂಸುಧಾರಣಾ ಕಾಯಿದೆಯಿಂದ ಪ್ರಾರಂಭವಾಗಿ ಈಗ ಹಿಂಸಾಚಾರಕ್ಕೆ ತಿರುಗಿದ್ದು ಜನರಿಗೆ ನೋವು ತಂದಿದೆ ಎಂದು ಹೇಳಿದರು.
ಸಮಸ್ಯೆ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ: ಅಧಿಕಾರದಲ್ಲಿರುವವರು ಜನರ ಅಭಿಪ್ರಾಯವನ್ನು ಕೇಳದೇ, ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಧಾರಗಳನ್ನು ತೆಗೆದುಕೊಂಡಿರುವುದರಿಂದ ಜನರು ನರಳುತ್ತಿದ್ದಾರೆ ಇದರಿಂದಾಗಿ ರಾಜ್ಯ ಹೊತ್ತಿ ಉರಿಯುತ್ತಿದೆ. ಕೇಂದ್ರದ ನಾಯಕರು ಮಣಿಪುರಕ್ಕೆ ಬಂದು ವಾಸ್ತವ ಸ್ಥಿತಿ ನೋಡಬೇಕು. ಮಣಿಪುರದ ಸಮಸ್ಯೆ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ, ಬದಲಿಗೆ ಇದು ಎಲ್ಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯ ಜನರ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಎಲ್ಲ ವ್ಯಕ್ತಿಗಳು, ಯಾವುದೇ ಭಿನ್ನಾಭಿಪ್ರಾಯವನ್ನು ಲೆಕ್ಕಿಸದೇ, ಒಗ್ಗೂಡಿ ರಾಜ್ಯದಲ್ಲಿ ಶಾಂತಿ ನೆಲಸಲಿ ಎಂದು ಪ್ರಾರ್ಥಿಸ ಬೇಕಾಗಿದೆ ಎಂದರು.
ಮಣಿಪುರವು ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳನ್ನು ಹೊಂದಿರುವ ಬಹುಸಂಸ್ಕೃತಿಯ ರಾಜ್ಯವಾಗಿದೆ ಮತ್ತು ಆದ್ದರಿಂದ, ಎಲ್ಲ ಸಮುದಾಯಗಳ ಕಾಳಜಿಯನ್ನು ಗಣನೆಗೆ ತೆಗೆದುಕೊಂಡು ಸಮಸ್ಯೆಯನ್ನು ಪ್ರಜಾಸತ್ತಾತ್ಮಕವಾಗಿ ವಿಂಗಡಿಸಬೇಕಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಯಾವುದೇ ಸಮುದಾಯವನ್ನು ಕೀಳಾಗಿ ನೋಡುವುದು ಅಥವಾ ಅವರನ್ನು ವಿಭಿನ್ನವಾಗಿ ನಡೆಸಿಕೊಳ್ಳುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಶರ್ಮಿಳಾ ಅವರು ಹೇಳಿದ್ದಾರೆ.
ಘಟನೆಯ ಹಿನ್ನೆಲೆ: ಮಣಿಪುರದ ಮೈಟೀಸ್ ಸಮುದಾಯವು ಪರಿಶಿಷ್ಟ ಪಂಗಡ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದೆ. ಇದು ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದವರನ್ನು ಕೆರಳಿಸಿದೆ. ಇದನ್ನು ವಿರೋಧಿಸಿ ಬುಧವಾರ (ಮೇ 3 ರಂದು) ಅಖಿಲ ಬುಡಕಟ್ಟು ವಿದ್ಯಾರ್ಥಿ ಸಂಘವು ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ ಹಮ್ಮಿಕೊಂಡಿತ್ತು. ಚುರಾಚಂದ್‌ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಘರ್ಷಣೆ ಉಂಟಾಗಿದೆ. ಬಳಿಕ, ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇದು ರಾಜ್ಯಾದ್ಯಂತ ಹಿಂಸಾಚಾರ ಉಂಟಾಗಲು ಕಾರಣವಾಯಿತು. ಬಳಿಕ, ಸಂಘರ್ಷವನ್ನ ಹತೋಟಿಗೆ ತರಲು ಮಣಿಪುರ ಪೊಲೀಸರೊಂದಿಗೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಘಟಿಕೋತ್ಸವದ ಭಾಷಣದ ವೇಳೆ ಪವರ್ ಕಟ್..!