ಇಂಫಾಲ್ (ಮಣಿಪುರ): ಈಶಾನ್ಯ ರಾಜ್ಯ ಮಣಿಪುರದಲ್ಲಿ ಪ್ರಕ್ಷುಬ್ಧತೆ ಮುಂದುವರಿದಿದೆ. ಬಿಷ್ಣುಪುರ್ ಜಿಲ್ಲೆಯ ಕಾಂಗ್‌ವೈ ಮತ್ತು ಫೌಗಕ್‌ಚಾವೊ ಪ್ರದೇಶಗಳಲ್ಲಿ ಗುರುವಾರ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ. ಈ ಘರ್ಷಣೆಯಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಮೇ 3ರಿಂದ ಹಿಂಸಾಚಾರ ಪೀಡಿತವಾಗಿರುವ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಮತ್ತೆ ಕರ್ಫ್ಯೂ ಹೇರಲಾಗಿದೆ.
ಇದುವರೆಗೆ ಘರ್ಷಣೆಯಲ್ಲಿ ಮೃತಪಟ್ಟ ಸುಮಾರು 35 ಜನರ ಸಾಮೂಹಿಕ ಶವಸಂಸ್ಕಾರವನ್ನು ಚುರಾಚಂದ್‌ಪುರದಲ್ಲಿ ನೆರವೇರಿಸಲು ಕುಕಿ ಸಮುದಾಯದವರು ನಿರ್ಧರಿಸಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಬರುತ್ತಿದ್ದರು. ಈ ವೇಳೆ ಜನರನ್ನು ಸ್ಥಳಕ್ಕೆ ತಲುಪದಂತೆ ತಡೆಯಲು ಯತ್ನಿಸಲಾಗಿದೆ. ಇದರ ಭಾಗವಾಗಿ ಸೇನೆ ಮತ್ತು ಕೇಂದ್ರ ಕ್ಷಿಪ್ರ ಕಾರ್ಯಾಚರಣೆ ಪಡೆ ಬಿಷ್ಣುಪುರ ಮತ್ತು ಚುರಚಂದಪುರವನ್ನು ಸಂಪರ್ಕಿಸುವ ರಸ್ತೆಯಲ್ಲಿ ಬ್ಯಾರಿಕೇಡ್ ಸ್ಥಾಪಿಸಿದ ನಂತರ ಘರ್ಷಣೆ ಉಂಟಾಗಿದೆ. ಜನರ ಗುಂಪನ್ನು ಚದುರಿಸಲು ಸೇನೆ ಮತ್ತು ಆರ್‌ಎಎಫ್ ಅಶ್ರುವಾಯು ಪ್ರಯೋಗಿಸಿದ್ದರಿಂದ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ಈ ಪರಿಸ್ಥಿತಿ ಉಲ್ಬಣಗೊಳ್ಳುತ್ತಿರುವುದರಿಂದ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಆಡಳಿತವು ಅನಿರ್ದಿಷ್ಟ ಅವಧಿಯವರೆಗೆ ಕರ್ಫ್ಯೂ ವಿಧಿಸಿದೆ. ಇದರ ಪರಿಣಾಮವಾಗಿ ಇತ್ತೀಚಿನ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ಕುಕಿ-ಜೋ ಜನರ ಸಾಮೂಹಿಕ ಅಂತ್ಯಕ್ರಿಯೆಯನ್ನು ನಿಲ್ಲಿಸಲಾಗಿದೆ. ಇದನ್ನು ಬುಡಕಟ್ಟು ಸಂಸ್ಥೆ ಐಟಿಎಲ್‌ಎಫ್ (Indigenous Tribal Leader Forum - ITLF) ಸ್ಪಷ್ಟಪಡಿಸಿದೆ.
ಅಲ್ಲದೇ, ಐಟಿಎಲ್‌ಎಫ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದೆ. ಎಸ್. ಬೋಲ್ಜಾಂಗ್, ಚುರಾಚಂದ್‌ಪುರ, ಮಣಿಪುರದಲ್ಲಿ ಸಮಾಧಿ ಸ್ಥಳವನ್ನು ಕಾನೂನುಬದ್ಧಗೊಳಿಸಬೇಕು. ಕುಕಿ-ಜೋ ಸಮುದಾಯಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಗುಡ್ಡಗಾಡು ಜಿಲ್ಲೆಗಳಲ್ಲಿ ಮೈಟೈ ರಾಜ್ಯದ ಪಡೆಗಳನ್ನು ನಿಯೋಜಿಸಬಾರದು. ಅಂತ್ಯಕ್ರಿಯೆ ವಿಳಂಬದಿಂದಾಗಿ ಇಂಫಾಲ್‌ನಲ್ಲಿರುವ ಕುಕಿ-ಜೋ ಸಮುದಾಯಗಳ ಮೃತದೇಹಗಳನ್ನು ಲಮ್ಕಾ (ಚುರಚಂದಪುರ)ಗೆ ಸ್ಥಳಾಂತರ ಮಾಡಬೇಕು. ಮಣಿಪುರದಿಂದ ಸಂಪೂರ್ಣ ಪ್ರತ್ಯೇಕತೆಯ ರಾಜಕೀಯ ಬೇಡಿಕೆಗೆ ವೇಗ ನೀಡಬೇಕು. ಇಂಫಾಲದಲ್ಲಿರುವ ಬುಡಕಟ್ಟು ಕೈದಿಗಳನ್ನು ಅವರ ಸುರಕ್ಷತೆ ನಿಟ್ಟಿನಲ್ಲಿ ಇತರ ರಾಜ್ಯಗಳಿಗೆ ಸ್ಥಳಾಂತರ ಮಾಡಬೇಕೆಂದು ಐಟಿಎಲ್‌ಎಫ್ ಮನವಿ ಮಾಡಿದೆ.
ಮತ್ತೊಂದೆಡೆ, ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳಲ್ಲಿ ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಮಣಿಪುರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಪ್ರತಿಪಕ್ಷಗಳ ನಾಯಕರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಿ: ರಾಷ್ಟ್ರಪತಿ ಭೇಟಿಯಾದ ಖರ್ಗೆ ನಿಯೋಗದ ಒತ್ತಾಯ