ಇಂಫಾಲ (ಮಣಿಪುರ) : ಜನಾಂಗೀಯ ಕದನಕ್ಕೆ ಗುರಿಯಾಗಿರುವ ಮಣಿಪುರದಲ್ಲಿ ಇಂದಿನಿಂದ ತುರ್ತು ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ರಾಜ್ಯದಲ್ಲಿ ಬಿಗಿಭದ್ರತೆ ವಹಿಸಲಾಗಿದೆ. ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿ 3,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇಂದು ಕೂಡ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಇಂಫಾಲ ಪಶ್ಚಿಮ, ಇಂಫಾಲ ಪೂರ್ವ, ಬಿಷ್ಣುಪುರ್, ತೌಬಾಲ್ ಮತ್ತು ಕಾಕ್ಚಿಂಗ್ ಜಿಲ್ಲೆಗಳ ಹವಲು ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿವೆ. ಈ ವೇಳೆ 6 ಶಸ್ತ್ರಾಸ್ತ್ರಗಳು, 5 ಮದ್ದುಗುಂಡುಗಳು ಮತ್ತು 2 ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ದಂಗೆಕೋರ ಗುಂಪಿನ ರಾಜಕೀಯ ವಿಭಾಗವಾದ ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ (ಆರ್‌ಪಿಎಫ್), ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಲಿಮ್ ಇಸಾಕ್-ಮುಯಿವಾ (ಎನ್‌ಎಸ್‌ಸಿಎನ್-ಐಎಂ) ಮತ್ತು ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ(ಕೆಸಿಪಿ), ಓವರ್ ಗ್ರೌಂಡ್ ವರ್ಕರ್ಸ್ನ (ಒಜಿಡಬ್ಲ್ಯು) ಇಬ್ಬರು ಸಕ್ರಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರದ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಅಸ್ಸೋಂನ ಗುವಾಹಟಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಈ ಆದೇಶ ನೀಡಿದೆ.
ತುರ್ತು ವಿಧಾನಸಭೆ ಅಧಿವೇಶನ : ರಾಜ್ಯದಲ್ಲಿ ಸಂಘರ್ಷದ ನಡುವೆಯೂ ರಾಜ್ಯಪಾಲರು ಇಂದು (ಮಂಗಳವಾರ) ತುರ್ತು ವಿಧಾನಸಭೆ ಅಧಿವೇಶನವನ್ನು ಕರೆದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ, ಕಲಹವನ್ನು ತಡಯುವಲ್ಲಿ ಸಿಎಂ ಎನ್ ಬಿರೈನ್ ಸಿಂಗ್ ವಿಫಲವಾಗಿದ್ದು, ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಈ ಬಗ್ಗೆಯೂ ಸದನದಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಬಿಗಿಭದ್ರತೆ : ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ರಾಜ್ಯದಲ್ಲಿ ಬಿಗಿಭದ್ರತೆ ವಹಿಸಲಾಗಿದೆ. ಕಾನೂನು ಸುವ್ಯವಸ್ಥೆ ಕೊಂಚ ಸುಧಾರಿಸುತ್ತಿದ್ದರೂ, ಅಲ್ಲಲ್ಲಿ ಘರ್ಷಣೆಗಳು ಮುಂದುವರೆದಿವೆ. ಮುನ್ನೆಚ್ಚರಿಕಾ ಕ್ರಮವಾಗಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮತ್ತು ಭದ್ರತಾ ಪಡೆಗಳು 2 ದಿನಗಳ ಅಂತರದಲ್ಲಿ 36 ಶಸ್ತ್ರಾಸ್ತ್ರಗಳು, 18 ಭಾರಿ ಸ್ಫೋಟಕಗಳನ್ನು ಜಪ್ತಿ ಮಾಡಿದ್ದು, 3,664 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಆಗಸ್ಟ್ 27 ರಂದು ಇಂಫಾಲ ಪೂರ್ವ ಜಿಲ್ಲೆಯಲ್ಲಿ ಐದು ಮನೆಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಬಳಿಕ ಭದ್ರತಾ ಸಿಬ್ಬಂದಿಯ ಮೂರು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದರು.
ಇದನ್ನೂ ಓದಿ: ಮಣಿಪುರದಲ್ಲಿ ನಾಳೆ ತುರ್ತು ವಿಧಾನಸಭೆ ಅಧಿವೇಶನ: 3,662 ಮಂದಿ ವಶಕ್ಕೆ, ಶಸ್ತ್ರಾಸ್ತ್ರ, ಸ್ಫೋಟಕಗಳು ಜಪ್ತಿ