ನವದೆಹಲಿ: ಈಶಾನ್ಯ ರಾಜ್ಯ ಮಣಿಪುರ ಸುಮಾರು ಎರಡು ತಿಂಗಳ ಕಾಲ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿ ಹೋಗಿದೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯನ್ನು ವಿವರಿಸಲು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.
ಗೃಹ ಸಚಿವ ಅಮಿತ್ ಶಾ ಭೇಟಿ ನಂತರ ಮುಖ್ಯಮಂತ್ರಿ ಬಿರೇನ್ ಸಿಂಗ್ ಸುದೀರ್ಘವಾದ ಟ್ವೀಟ್ ಮಾಡಿದ್ದು, ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಣಿಪುರದ ನೆಲದ ಮೇಲೆ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ವಿವರಿಸಲಾಯಿತು ಎಂದು ಹೇಳಿದ್ದಾರೆ. ಅಮಿತ್ ಶಾ ಅವರ ನಿಕಟ ಮೇಲ್ವಿಚಾರಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಳೆದ ವಾರದಲ್ಲಿ ಹಿಂಸಾಚಾರವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಲು ಸಮರ್ಥವಾಗಿವೆ. ಜೂನ್ 13ರಿಂದ ಹಿಂಸಾಚಾರದಿಂದಾಗಿ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ಮಣಿಪುರದಲ್ಲಿ ಶಾಂತಿ ಕಾಪಾಡಲು ಸಾಧ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು. ಇದಲ್ಲದೆ, ಅಮಿತ್ ಶಾ ಅವರು ಶಾಶ್ವತ ಶಾಂತಿಯನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ಕೆಲಸವನ್ನು ಬಲಪಡಿಸಲು ಸಲಹೆ ನೀಡಿದರು. ರಾಜ್ಯದಲ್ಲಿ ಶಾಂತಿ ನೆಲೆಸುವುದನ್ನು ಖಚಿತಪಡಿಸಿಕೊಳ್ಳಲು ಮಣಿಪುರದ ಪ್ರತಿಯೊಬ್ಬ ಪಾಲುದಾರರ ಸಹಕಾರವನ್ನು ಕೋರಿದರು ಎಂದು ಸಿಎಂ ಬಿರೇನ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನೊಂದಿಗೆ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಸಂಬಿತ್ ಪಾತ್ರ, ರಾಜ್ಯಸಭಾ ಸಂಸದ ಮಹಾರಾಜ ಮಣಿಪುರ, ಸ್ಪೀಕರ್ ಟಿ ಸತ್ಯಬ್ರತ ಸಿಂಗ್ ಇದ್ದರು ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: Manipur Violence: ಮಣಿಪುರ ಪರಿಸ್ಥಿತಿ ಕುರಿತು ಸರ್ವಪಕ್ಷ ಸಭೆ ನಡೆಸಿದ ಅಮಿತ್ ಶಾ: ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮದ ಭರವಸೆ
ಮಣಿಪುರ ಬಿಕ್ಕಟ್ಟಿನ ಬಗ್ಗೆ ಶನಿವಾರ ಅಮಿತ್ ಶಾ ಸರ್ವಪಕ್ಷ ಸಭೆಯನ್ನು ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ದಿನದಿಂದಲೂ ಮಣಿಪುರದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಪೂರ್ಣ ಸೂಕ್ಷ್ಮತೆಯಿಂದ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮಣಿಪುರದ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ ಮತ್ತು ರಾಜ್ಯದಲ್ಲಿ ಹಿಂಸಾಚಾರದಲ್ಲಿ ಜೂನ್ 13ರಿಂದ ಒಬ್ಬ ವ್ಯಕ್ತಿಯೂ ಸಾವನ್ನಪ್ಪಿಲ್ಲ ಎಂದು ಶಾ ಸಭೆಯಲ್ಲಿ ಹೇಳಿದ್ದರು.
ಅಲ್ಲದೇ, ಪರಿಸ್ಥಿತಿಯನ್ನು ಶಮನಗೊಳಿಸಲು ಮತ್ತು ಮಣಿಪುರದ ವಿವಿಧ ಸಮುದಾಯಗಳ ನಡುವೆ ಶಾಂತಿ ಮತ್ತು ವಿಶ್ವಾಸವನ್ನು ಮರುಸ್ಥಾಪಿಸಲು ಸಹಾಯ ಮಾಡಲು ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಗೃಹ ಸಚಿವರು ಕೋರಿದ್ದರು. ಬಿಜೆಪಿ ಸೇರಿದಂತೆ 18 ರಾಜಕೀಯ ಪಕ್ಷಗಳು ಮತ್ತು ಈಶಾನ್ಯದ ನಾಲ್ಕು ಸಂಸದರು ಮತ್ತು ಈ ಪ್ರದೇಶದ ಇಬ್ಬರು ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು.