ಸೂರತ್ (ಗುಜರಾತ್): ಗುಜರಾತ್ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಜಿದ್ದಾಜಿದ್ದಿ ಜೋರಾಗುತ್ತಿದೆ. ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ.
ಆಯಾ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ತಮ್ಮ ಪ್ರಚಾರಕ್ಕಾಗಿ ತಮ್ಮ ಬ್ರ್ಯಾಂಡ್ನ ಹೊಸ ಉತ್ಪನ್ನಗಳಿಗೆ ಭಾರಿ ಹಣ ಖರ್ಚು ಮಾಡುತ್ತಿವೆ. ಬಟ್ಟೆ, ಆಭರಣ, ಮಂಗಳಸೂತ್ರ, ಕೂದಲಿನ ಬಕಲ್ಗಳು, ಬಳೆ ಮತ್ತು ಉಂಗುರಗಳ ಮೇಲೆ ತಮ್ಮ ಪಕ್ಷದ ಚಿಹ್ನೆ ಮತ್ತು ಧ್ವಜಗಳನ್ನು ಮುದ್ರಿಸಿ, ಮತದಾರರಿಗೆ ಹಂಚುವ ಸಲುವಾಗಿ ಪ್ರಚಾರದಲ್ಲಿ ನಿರತವಾಗಿರುವ ಕಾರ್ಯಕರ್ತರಿಗೆ ನೀಡುತ್ತಿವೆ.
ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದ ಚುನಾವಣೆ ನಡೆಯಲಿರುವ ಗುಜರಾತ್‌ನ ಎಲ್ಲ 182 ವಿಧಾನಸಭಾ ಸ್ಥಾನಗಳಲ್ಲಿ ಚುನಾವಣಾ ಪ್ರಚಾರದ ಬಿಸಿ ಏರಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಮತದಾನದ ದಿನಕ್ಕೆ ಸಿದ್ಧರಾಗಲು ಬಿಡುವಿಲ್ಲದ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳ ತಯಾರಿಕೆ ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮವಾಗಿ ಮಾರ್ಪಟ್ಟಿದೆ.
ಸೂರತ್‌ನಲ್ಲಿ ಸದಾ ಜವಳಿಗೆ ಬೇಡಿಕೆ: ಯಾವುದೇ ಚುನಾವಣೆ ಇದ್ದರೂ ಜವಳಿ ರಾಜಧಾನಿ ಸೂರತ್ ನಗರದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಸೂರತ್‌ನಲ್ಲಿ ಚುನಾವಣೆಗೆ ಸಂಬಂಧಿಸಿದ ಪರಿಕರಗಳನ್ನು ಹೇರಳವಾಗಿ ತಯಾರಿಸಲಾಗುತ್ತಿದೆ. ಪ್ರತಿಯೊಂದು ಪಕ್ಷವು ಮಹಿಳಾ ಕಾರ್ಯಕರ್ತರಿಗೆ ತಮ್ಮ ಮಂಗಳಸೂತ್ರಗಳಲ್ಲಿ ಕೂಡ ಪಕ್ಷದ ಚಿಹ್ನೆಗಳನ್ನು ತೋರಿಸುವಂತೆ ನಿರ್ದೇಶನ ನೀಡುತ್ತಿರುವುದರಿಂದ ಚುನಾವಣಾ ಪ್ರಚಾರದಲ್ಲಿ ಆಭರಣಗಳ ಭರಾಟೆ ಜೋರಾಗಿದೆ.
ವಿಶೇಷ ಸಂದರ್ಭದ ಉಡುಗೆಗೆ ಡಿಮ್ಯಾಂಡ್: ಕಮಲ, ಹಸ್ತ ಅಥವಾ ಪೊರಕೆ ಚಿಹ್ನೆಗಳ ಪೆಂಡೆಂಟ್‌ಗಳು ಮತ್ತು ವಿಶೇಷ ಸಂದರ್ಭದ ಉಡುಗೆಗಾಗಿ ಇತರ ವೈಯಕ್ತಿಕ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದೆ. ಮಹಿಳೆಯರ ಕೇಶ ವಿನ್ಯಾಸಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಕಲ್‌ಗಳನ್ನು ಪಾರ್ಟಿಗಳ ಲೋಗೋ ಗೋಚರಿಸುವಂತೆ ಮುದ್ರಿಸಲಾಗಿದೆ. ಈ ಬಾರಿ ವಜ್ರಗಳಿಂದ ಕೂಡಿದ ಉಂಗುರಗಳು ಕೂಡ ಪ್ರಚಾರದಲ್ಲಿ ಕಾಣಿಸಿಕೊಂಡಿವೆ.
ಪ್ರತಿ ಚುನಾವಣೆಯಲ್ಲಿ, ಸೂರತ್‌ನಲ್ಲಿರುವ ಗೋಯಲ್ ಎಂಟರ್‌ಪ್ರೈಸಸ್ ಪ್ರಚಾರ ಸಾಮಗ್ರಿಗಳನ್ನು ತಯಾರಿಸುತ್ತದೆ. ಈ ಕಂಪನಿ ಬೇಡಿಕೆಯ ಮೇಲೆ ಹಲವಾರು ಉತ್ಪನ್ನಗಳನ್ನು ತಯಾರಿಸುತ್ತದೆ. ಧ್ವಜ, ಸೀರೆ, ಮೊಬೈಲ್ ಸ್ಟ್ಯಾಂಡ್, ಬಕಲ್ ಮತ್ತು ಬಳೆಗಳಿಗೆ ಈಗ ಹೆಚ್ಚಿನ ಬೇಡಿಕೆಯಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ ತ್ರಿಕೋನ ಸ್ಪರ್ಧೆ: ಎಎಪಿ ಶೇ 6 ರಷ್ಟು ಮತ ಪಡೆದರೆ ರಾಷ್ಟ್ರೀಯ ಪಕ್ಷಗಳಿಗೆ ಸಂಕಷ್ಟ!