ತಿರುನಲ್ವೇಲಿ(ತಮಿಳುನಾಡು): ಹೆಚ್‌ಐವಿ ಇದೆ ಎಂದು ತಪ್ಪು ವೈದ್ಯಕೀಯ ವರದಿ ನೀಡಿರುವ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿರುನಲ್ವೇಲಿಯ ನೆಲ್ಲೈ ಪಾಳಯಂಕೊಟ್ಟೈ ಕೊಟ್ಟೂರಿನ ನಿವಾಸಿ ಅಕ್ಬರ್ ಅಲಿ (74) ಎಂಬುವವರು ನೆಲ್ಲೈ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ: ಊದಿಕೊಂಡ ಕಾಲಿನ ಚಿಕಿತ್ಸೆಗಾಗಿ ಅಕ್ಬರ್ ಅಲಿ ಅವರನ್ನು ಮಗ ಮೈದೀನ್ ಪಿಚೈ ಅವರು ಪಳಯಂಕೊಟ್ಟೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಅವರಿಗೆ ಮಧುಮೇಹವಿದೆ ಮತ್ತು ಒಂದು ಬೆರಳನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದರು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ರಕ್ತ ಪರೀಕ್ಷೆಯ ನಡೆಸಿದಾಗ ಅವರಿಗೆ ಹೆಚ್‌ಐವಿ/ಏಡ್ಸ್ ಇರುವುದು ಪತ್ತೆಯಾಗಿತ್ತು.
ಇದನ್ನು ಕೇಳಿದ ಅಕ್ಬರ್ ಅಲಿ ಮತ್ತು ಅವರ ಮಗ ಆಘಾತಕ್ಕೊಳಗಾದರು. ಬಳಿಕ ಅಕ್ಬರ್ ಅಲಿ ಅವರನ್ನು ಡಿಸ್ಚಾರ್ಜ್ ಮಾಡಿ ನೆಲ್ಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಇದೇ ವೇಳೆ, ನೆಲ್ಲೈ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತ ಪರೀಕ್ಷೆಯಲ್ಲಿ ಅಕ್ಬರ್ ಅಲಿ ಅವರಿಗೆ ಹೆಚ್‌ಐವಿ ಸೋಂಕು ತಗುಲಿರಲಿಲ್ಲ ಎಂಬುದು ತಿಳಿದು ಬಂದಿದೆ. ಸುಳ್ಳು ವೈದ್ಯಕೀಯ ವರದಿ ನೀಡಿರುವ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಕ್ಬರ್ ಅಲಿ ಅವರ ಪುತ್ರ ನೆಲ್ಲೈ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪತ್ರ ಬರೆದಿದ್ದು ಗ್ಯಾಂಗ್ಸ್ಟರ್ ಬಿಷ್ಣೋಯಿ ಆಪ್ತ