ರಾಂಪುರ್ (ಉತ್ತರ ಪ್ರದೇಶ) : ವಿವಾಹೇತರ ಸಂಬಂಧ ಹೊಂದಿರುವ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯ ಖಾಸಗಿ ಜಾಗಕ್ಕೆ ಹೊಲಿಗೆ ಹಾಕಿ ದುರ್ವರ್ತನೆ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.
ರಾಂಪುರ್ ನಿವಾಸಿಯಾಗಿರುವ ಗಂಡ-ಹೆಂಡ್ತಿ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಬೇರೆ ವ್ಯಕ್ತಿಯೊಂದಿಗೆ ತನ್ನ ಹೆಂಡ್ತಿ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಗಂಡನ ಮನದಲ್ಲಿ ಮನೆ ಮಾಡಿತ್ತು. ಹೀಗಾಗಿ ಆತ ತನ್ನ ಪತ್ನಿಯೊಡನೆ ಪ್ರತಿನಿತ್ಯ ಜಗಳ ಕಾಯುತ್ತಿದ್ದು, ದೈಹಿಕ ಹಿಂಸೆ ನೀಡುತ್ತಿದ್ದನು.
ದಿನ ಕಳೆಯುತ್ತಿದ್ದಂತೆ ಗಂಡನ ಲೈಂಗಿಕ ಕಿರುಕುಳ ಹೆಚ್ಚಾಗಿದೆ. ಕಳೆದ ದಿನ ಹೆಂಡ್ತಿ ಮೇಲೆ ಹಲ್ಲೆ ಮಾಡಿದ ಗಂಡ ಆಕೆ ಕಿರುಚದಂತೆ ಬಾಯಿಗೆ ಬಟ್ಟೆಯಿಟ್ಟು ಖಾಸಗಿ ಜಾಗಕ್ಕೆ ಹೊಲಿಗೆ ಹಾಕಿದ್ದಾನೆ. ಬಳಿಕ ಆಕೆ ಸ್ಥಿತಿ ಗಂಭೀರಗೊಂಡಿದ್ದರಿಂದ ಅಲ್ಲಿಂದ ಆರೋಪಿ ಕಾಲ್ಕಿತ್ತಿದ್ದಾನೆ.
ಮಹಿಳೆ ತನ್ನ ಬಾಯಿಗೆ ಹಾಕಿರುವ ಬಟ್ಟೆಯನ್ನು ತೆಗೆದು ಹಾಕಿ ಸಹಾಯಕ್ಕಾಗಿ ಕಿರುಚಿದ್ದಾಳೆ. ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸ್ಥಳೀಯರು ಈ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದರು.
ಪೊಲೀಸರು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹಿಳೆಯ ಹೇಳಿಕೆ ಪಡೆದು ಗಂಡನ ವಿರುದ್ಧ ದೂರು ದಾಖಲಿಸಿಕೊಂಡರು. ಆರೋಪಿ ಗಂಡನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.