ಕಾನ್ಪುರ(ಉತ್ತರ ಪ್ರದೇಶ): ಬಾಲಕಿಗೆ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿದ್ದಕ್ಕಾಗಿ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಘಟನೆ ನಡೆದಿದೆ. ಕಳೆದ ಮಂಗಳವಾರ ಸಂಜೆ ಈ ಪ್ರಕರಣ ನಡೆದಿದೆ.
ಕಾನ್ಪುರದ ಕಚಿ ಬಸ್ತಿಯಲ್ಲಿ ತನ್ನ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಬಾಲಕಿಗೆ ಕೆಲವರು ಕಿರುಕುಳ ನೀಡುತ್ತಿದ್ದರು. ಇದಕ್ಕೆ ನೈರ್ಮಲ್ಯ ಕಾರ್ಯಕರ್ತ ಸಂಜಯ್ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಆತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೃತರನ್ನು ಕಾನ್ಪುರ್ ಮುನ್ಸಿಪಲ್ ಕಾರ್ಪೊರೇಷನ್ ನೈರ್ಮಲ್ಯ ಕಾರ್ಮಿಕ ಸಂಜಯ್ ವಾಲ್ಮೀಕಿ(35) ಎಂದು ಗುರುತಿಸಲಾಗಿದೆ. ಸಂಜಯ್ ಅವರ ಸಹೋದರ ಕಮಲ್ ನೀಡಿರುವ ಮಾಹಿತಿ ಪ್ರಕಾರ, ಅದೇ ಕಾಲೋನಿಯಲ್ಲಿ ವಾಸಿಸುವ ವಿಶಾಲ್ ಎಂಬಾತ ನೆರೆಹೊರೆಯಲ್ಲಿ ವಾಸವಾಗಿದ್ದ ಹುಡುಗಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ.
ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ವಿಶಾಲ್ ಮತ್ತು ಆತನ ಕೆಲ ಸಹಚರರು ಬಾಲಕಿ ಹಾಗೂ ತಾಯಿಗೆ ತೊಂದರೆ ನೀಡುತ್ತಿದ್ದರು. ಇದಕ್ಕೆ ಬಾಲಕಿ ವಿರೋಧಿಸಿದ್ದಕ್ಕಾಗಿ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪಕ್ಕದಲ್ಲೇ ವಾಸವಾಗಿದ್ದ ಸಂಜಯ್ ಮಧ್ಯಪ್ರವೇಶ ಮಾಡಿದ್ದು, ಈ ವೇಳೆ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಮೃತ ವ್ಯಕ್ತಿಗೆ ಏಳು ತಿಂಗಳ ಮಗು ಇದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಕೀಲನಿಂದ ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ.. ರಾಜೇಶ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ
ತಕ್ಷಣವೇ ಗಾಯಾಳುವನ್ನು ಹಾಲೆಟ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ತೀವ್ರ ರಕ್ತಸ್ರಾವದಿಂದ ಸಂಜಯ್ ಸಾವನ್ನಪ್ಪಿದ್ದಾರೆ. ಈ ಹಿಂದೆ ಕೂಡ ವಿಶಾಲ್ ಬಾಲಕಿಗೆ ಕಿರುಕುಳ ನೀಡಿರುವ ಘಟನೆ ನಡೆದಿತ್ತು. ಈ ವೇಳೆ ಪೊಲೀಸರು ಮಧ್ಯಸ್ಥಿಕೆ ವಹಿಸಿ, ರಾಜಿ-ಸಂಧಾನ ಮಾಡಿದ್ದರು. ಇದೀಗ ಕೊಲೆ ನಡೆದಿದೆ. ಆರೋಪಿಗಳ ಬಂಧನಕ್ಕಾಗಿ ತಂಡ ರಚನೆ ಮಾಡಿದ್ದು, ಶೋಧಕಾರ್ಯ ನಡೆಯುತ್ತಿದೆ ಎಂದು ಎಎಸ್ಪಿ ವಿಕಾಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.