ವಿಶಾಖಪಟ್ಟಣಂ: ಕಳೆದ ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಎನ್‌ಜಿಒ ಕಾಲೋನಿಯಲ್ಲಿ ನಡೆದಿದ್ದ ಸತೀಶ್ ಎಂಬಾತನ ಕೊಲೆ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪತ್ನಿ ರಮ್ಯಾ ಹಾಗೂ ಆಕೆಯ ಪ್ರಿಯಕರ ಭಾಷಾ ಅರೆಸ್ಟ್ ಆಗಿದ್ದಾರೆ.
ಪ್ರಕರಣದ ವಿವರ
ಜುಲೈ 13ರ ಸಂಜೆ ಸತೀಶ್ ತನ್ನ ಹೆಂಡತಿ ಜೊತೆ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿವೋರ್ವ ಆತನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಕೊಲೆಗೈದಿದ್ದ. ಈ ಪ್ರಕರಣ ಇಡೀ ವಿಶಾಖಪಟ್ಟಣಂನಲ್ಲಿ ತಲ್ಲಣ ಉಂಟುಮಾಡಿತ್ತು. ಸತೀಶ್ ಪತ್ನಿ ರಮ್ಯಾ, ಸುಧಾಕರ್ ರೆಡ್ಡಿ ಎಂಬುವವರ ವಿರುದ್ಧ ದೂರು ದಾಖಲು ಮಾಡಿದ್ದಳು. ಹಣಕಾಸಿನ ಮನಸ್ತಾಪದಿಂದಾಗಿ ಈ ಕೊಲೆ ನಡೆದಿದ್ದಾಗಿ ದೂರಿನಲ್ಲಿ ತಿಳಿಸಿದ್ದಳು.
2015ರಲ್ಲಿ ಸತೀಶ್-ರಮ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸತೀಶ್ ದುಬೈನಲ್ಲಿ ವಾಸ ಮಾಡುತ್ತಿದ್ದ ಕಾರಣ ಪತ್ನಿಯನ್ನೂ ಅಲ್ಲಿಗೆ ಕರೆದುಕೊಂಡು ಹೋಗಿದ್ದನು. ಸುಧಾಕರ್ ರೆಡ್ಡಿ ಜೊತೆ ಸೇರಿ ಸತೀಶ್ ಬ್ಯುಸಿನೆಸ್ ಮಾಡ್ತಿದ್ದ. 2019ರಲ್ಲಿ ಗರ್ಭಿಣಿಯಾಗಿದ್ದು ವಿಶಾಖಪಟ್ಟಣಂಗೆ ವಾಪಸ್ ಆಗಿದ್ದಾಳೆ. ಈ ನಡುವೆ ಸುಧಾಕರ್ ಹಾಗೂ ಸತೀಶ್ ಮಧ್ಯೆ ಮನಸ್ತಾಪ ಉಂಟಾಗಿದೆ. 2021ರ ಫೆಬ್ರವರಿ ತಿಂಗಳಲ್ಲಿ ಸತೀಶ್ ಅಲ್ಲಿಂದ ವಾಪಸ್ ಆಗಿದ್ದ. ಈ ನಡುವೆ ರಮ್ಯಾ ತನ್ನ ಹೈಸ್ಕೂಲ್ ಫ್ರೆಂಡ್ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಾಳೆ. ಶಾಲೆಯ ವ್ಯಾಟ್ಸ್ಆ್ಯಪ್ ಗ್ರೂಪ್ ಮೂಲಕ ಆತನ ಫೋನ್ ನಂಬರ್ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಳು. ದುಬೈನಲ್ಲಿದ್ದ ಸತೀಶ್ಗೆ ಪತ್ನಿ ನಡೆ ಬಗ್ಗೆ ಅನುಮಾನ ಶುರುವಾಗಿತ್ತು. ಮಾಹಿತಿ ಗೊತ್ತಾಗುತ್ತಿದ್ದಂತೆ ಇವರ ಪ್ರೇಮಕ್ಕೆ ಅಡ್ಡಿಯಾಗಿದ್ದ.
ಗಂಡನ ಮುಗಿಸಲು ರಮ್ಯಾ ಸ್ಕೆಚ್!
ರಮ್ಯಾ ಹಾಗೂ ಹೈಸ್ಕೂಲ್ ಫ್ರೆಂಡ್ ಭಾಷಾ ನಡುವಿನ ಪ್ರೇಮಕ್ಕೆ ಗಂಡ ಸತೀಶ್ ಅಡ್ಡಿಯಾಗಿದ್ದ ಕಾರಣ ಆತನನ್ನು ಮುಗಿಸಲು ಸ್ಕೆಚ್ ಹಾಕಿದ್ದಾರೆ. ಅದರಂತೆ ಜುಲೈ 13ರಂದು ಮನೆಯಿಂದ ಹೊರಗಡೆ ಬಂದಾಗ ಆತನ ಕೊಲೆ ಮಾಡಿದ್ದಾರೆ. ಇದಾದ ಬಳಿಕ ವ್ಯವಹಾರ ಪಾಲುದಾರ ಸುಧಾಕರ್ ಮೇಲೆ ಈ ಪ್ರಕರಣವನ್ನು ಎತ್ತಿ ಕಟ್ಟಿದ್ದಾರೆ. ಪೊಲೀಸರಿಗೆ ಯಾವುದೇ ಸುಳಿವು ಸಿಗದ ರೀತಿಯಲ್ಲಿ ಆರೋಪಿಗಳು ಕೊಲೆ ಮಾಡಿದ್ದರು. ಆದರೆ ದುಬೈನಲ್ಲಿ ವಾಸವಾಗಿದ್ದ ಸುಧಾಕರ್‌ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇದಾದ ಬಳಿಕ ರಮ್ಯಾ ಮೇಲೆ ಅನುಮಾನ ವ್ಯಕ್ತಪಡಿಸಿ, ಪ್ರಶ್ನೆ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ.