ಹೈದರಾಬಾದ್(ತೆಲಂಗಾಣ): ಪತ್ನಿಯನ್ನು ಕೊಂದು, ಆಕೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹೈದರಾಬಾದ್ನ ವನಸ್ಥಲಿಪುರಂ ಏರಿಯಾದಲ್ಲಿ ಘಟನೆ ನಡೆದಿದ್ದು, ಕವಿತಾ ಕೊಲೆಯಾದ ಗೃಹಿಣಿಯಾಗಿದ್ದಾಳೆ. ಆಟೋ ರಿಕ್ಷಾ ಚಾಲಕನಾಗಿದ್ದ ರಮಾವತ್ ವಿಜಯ್ ನಾಯಕ್ ಪತ್ನಿಯನ್ನು ಕೊಂದು, ಆಕೆ ಕೊರೊನಾದಿಂದ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಆರೋಪಿ.
ಸಂದೇಹವೇ ಕಾರಣ..
ಕವಿತಾ ಬೇರೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ಅನುಮಾನಪಟ್ಟಿದ್ದ ರಮಾವತ್ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೂನ್ 18ರಂದು ಕವಿತಾ ಮಲಗಿರಬೇಕಾದರೆ ತಲೆದಿಂಬಿನ ಮೂಲಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಪೋಷಕರಿಗೆ ಕೋವಿಡ್ ಕಾರಣಕ್ಕೆ ಕವಿತಾ ಸಾವನ್ನಪ್ಪಿದ್ದಾಳೆ. ವನಸ್ಥಲಿಪುರಂ ಏರಿಯಾ ಆಸ್ಪತ್ರೆಯಲ್ಲಿ ಆಕೆಗೆ ಸೋಂಕು ಪರೀಕ್ಷೆ ಮಾಡಲಾಗಿತ್ತು ಎಂದು ರಮಾವತ್ ನಂಬಿಸಿದ್ದನು.
ತನ್ನದೇ ಆಟೋ ರಿಕ್ಷಾದಲ್ಲಿ ಮೃತದೇಹವನ್ನ ಆಕೆಯ ಪೋಷಕರೊಂದಿಗೆ ಪಿಲ್ಲಿಗುಂಡ್ಲ ಗ್ರಾಮಕ್ಕೆ ಒಯ್ದು ಅಂತ್ಯಸಂಸ್ಕಾರವನ್ನು ನಡೆಸಲಾಗಿತ್ತು. ಈ ವೇಳೆ ಮೃತದೇಹವನ್ನು ಮುಟ್ಟಲು ಆಕೆಯ ಪೋಷಕರಿಗೆ ಆತ ಅನುಮತಿ ನೀಡಿರಲಿಲ್ಲ.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದವರ ವರದಿ ನೆಗೆಟಿವ್..!
ಕವಿತಾಳ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರು, ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ಅವರೆಲ್ಲರ ವರದಿಗಳು ನೆಗೆಟಿವ್ ಬಂದಿದ್ದವು. ಆಗ ಕವಿತಾಳ ಸಂಬಂಧಿಕರು ವನಸ್ಥಲಿಪುರಂ ಆಸ್ಪತ್ರೆಗೆ ಭೇಟಿ ನೀಡಿ, ಕವಿತಾಳ ಕೋವಿಡ್ ಸೋಂಕು ಪರೀಕ್ಷಾ ವರದಿಗಳನ್ನ ಪರಿಶೀಲನೆ ಮಾಡಿದಾಗ ಅಲ್ಲಿ ನೆಗೆಟಿವ್ ಇದ್ದದ್ದು ಕಂಡುಬಂದಿದೆ.
ಕವಿತಾಳ ಸಂಬಂಧಿಗಳು ಕೋವಿಡ್ ವರದಿ ಬಗ್ಗೆ ಸಂದೇಹ ವ್ಯಕ್ತಪಡಿಸಿ, ವನಸ್ಥಲಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಕವಿತಾಳ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಅದು ಕೊಲೆಯೆಂದು ದೃಢಪಟ್ಟಿದೆ.
ನಂತರ ರಮಾವತ್ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೇ ಆಕೆಯನ್ನು ಕೊಂದಿರುವುದಾಗಿ ಮತ್ತು ಆಕೆಯ ನಡವಳಿಕೆಗಳ ಬಗ್ಗೆ ಅನುಮಾನಪಟ್ಟಿದ್ದಾಗಿಯೂ ಬಾಯ್ಬಿಟ್ಟಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೈ ಕತ್ತರಿಸಿದ ಪ್ರಕರಣ: ಮೂವರ ಬಂಧನ