ಕೋಲ್ಕತ್ತಾ (ಪಶ್ಚಿಮಬಂಗಾಳ) : ಪಶ್ಚಿಮಬಂಗಾಳದಲ್ಲಿ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ 24 ಉತ್ತರ ಪರಗಣದ ಗ್ರಾಮವೊಂದರಲ್ಲಿ ಪತಿಯೊಬ್ಬ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿ ಕಾಲುವೆಗೆ ಎಸೆದಿದ್ದಾನೆ. ಬಳಿಕ ಆರೋಪಿ ವಿಷಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಾನೆ.
ನೂರುದ್ದೀನ್ ಮಂಡಲ್ (55) ಕೊಲೆ ಮಾಡಿದ ಆರೋಪಿ. ಸಾಯಿರಾ ಬಾನು ಮೃತಪಟ್ಟ ದುರ್ದೈವಿ. ಯಾವ್ಯಾವುದೋ ವಿಚಾರಕ್ಕಾಗಿ ಇಬ್ಬರ ಮಧ್ಯೆ ನಿತ್ಯವೂ ಕಿತ್ತಾಟ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಆತ ಪತ್ನಿಯನ್ನು ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ.
ಮುಳುವಾದ ನಾಪತ್ತೆ ದೂರು: ಕೆಲವು ದಿನಗಳಿಂದ ತನ್ನ ಪತ್ನಿ ಕಾಣುತ್ತಿಲ್ಲ, ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ಆರೋಪಿ ನೂರುದ್ದೀನ್ ದೂರು ನೀಡಿದ್ದ. ತನಿಖೆ ಆರಂಭಿಸಿದ್ದ ಪೊಲೀಸರು ಎಲ್ಲ ಕೋನಗಳಿಂದ ವಿಚಾರಣೆ ನಡೆಸುತ್ತಿದ್ದರು. ದಂಪತಿಗೆ ಮಗಳಿದ್ದು, ಆಕೆಯನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಆರೋಪಿಯನ್ನು ಹಲವಾರು ಬಾರಿ ವಿಚಾರಣೆಗೆ ಕರೆದಿದ್ದಾರೆ. ಈ ವೇಳೆ, ಆತ ನೀಡಿದ ಹೇಳಿಕೆಗಳು ಗೊಂದಲ ಸೃಷ್ಟಿಸಿವೆ.
ತನ್ನ ಹೇಳಿಕೆಗಳಿಂದ ಸಿಕ್ಕಿಬೀಳುವ ಭಯದಲ್ಲಿ ಆರೋಪಿ ಮನೆ ಬಿಟ್ಟು ಓಡಿ ಹೋಗಿ ವಿಷ ಸೇವಿಸಿದ್ದಾನೆ. ಗ್ರಾಮದ ಹೊರಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ದೂರು ನೀಡಿದಾತ ಎಂದು ಗುರುತಿಸಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಭೀಕರತೆ ಬಾಯ್ಬಿಟ್ಟ ಆರೋಪಿ: ಚಿಕಿತ್ಸೆ ಪಡೆದ ಬಳಿಕ ಪ್ರಾಣಾಪಾಯದಿಂದ ಪಾರಾದ ಆರೋಪಿಯನ್ನು ವಿಚಾರಣೆ ನಡೆಸಿದಾಗ, ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ದೇಹವನ್ನು ತುಂಡರಿಸಿ ಕಾಲುವೆಗೆ ಬಿಸಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ಮನೆಯ ಮುಂದಿನ ಕಾಲುವೆಯಲ್ಲಿ ಹುಡುಕಾಡಿದಾಗ, ಮಹಿಳೆಯ ದೇಹದ ತುಂಡುಗಳು ಒಂದೊಂದಾಗಿ ಪತ್ತೆಯಾಗಿವೆ. ದೇಹದ ಹಲವು ಭಾಗಗಳು ಇನ್ನೂ ಪತ್ತೆಯಾಗಿಲ್ಲ. ಅವುಗಳ ಪತ್ತೆಗಾಗಿ ದೋಣಿ ಮೂಲಕ ಹುಡುಕಾಟ ನಡೆಸಲಾಗುತ್ತಿದೆ.
ಮೂಲಗಳ ಪ್ರಕಾರ, ಪತಿ - ಪತ್ನಿಯ ನಡುವೆ ವೈವಾಹಿಕ ಕಲಹ ಉಂಟಾಗಿತ್ತು. ಇತ್ತೀಚೆಗಷ್ಟೇ ಸಂಘರ್ಷ ವಿಕೋಪಕ್ಕೆ ಹೋಗಿತ್ತು ಎಂದು ತಿಳಿದು ಬಂದಿದೆ. ಪ್ರಕರಣದ ಹಿಂದೆ ಬೇರೆ ಕಾರಣವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿಗಳು ಆರೋಪಿಯ ಮಗಳನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿಯಲ್ಲಿ 2022 ರಲ್ಲಿ ಯುವತಿ ಶ್ರದ್ಧಾ ವಾಕರ್ ಭೀಕರ ಕೊಲೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಲಿವ್ಇನ್ ರಿಲೇಶನ್ಶಿಪ್ನಲ್ಲಿದ್ದ ಶ್ರದ್ಧಾಳನ್ನು ಪ್ರೇಮಿ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿ, ದೇಹವನ್ನು 35 ತುಂಡು ಮಾಡಿ ಫ್ರೀಜರ್ನಲ್ಲಿಟ್ಟು, ದಿನಕ್ಕೊಂದು ಭಾಗವನ್ನು ನಿರ್ಜನ ಪ್ರದೇಶದಲ್ಲಿ ಬಿಡಾಡುತ್ತಿದ್ದ.
ಇದನ್ನೂ ಓದಿ: ಕಾಡುಪ್ರಾಣಿಗಳ ಬೇಟೆಗೆ ಇಟ್ಟಿದ್ದ ಸಿಡಿಮದ್ದು ತಂದ ಆಪತ್ತು; ಎತ್ತು ಸಾವು