ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಯುವಕನೊಬ್ಬ ತನ್ನ ಗೆಳತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ನಂತರ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಕೊಲೆಯಾದ ಯುವತಿ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಇಬ್ಬರ ಮಧ್ಯೆ ನಡೆದ ಜಗಳದ ನಂತರ ಗೆಳತಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆಯಾದ ವೈದ್ಯೆಯನ್ನು ಜಮ್ಮುವಿನ ತಲಾಬ್ ಟಿಲ್ಲೋ ನಿವಾಸಿ ಸುಮೇಧಾ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಜೋಹರ್ ಗನೈ ಈ ಕೊಲೆ ಮಾಡಿದ್ದು, ಈತ ಇದೇ ಜಮ್ಮುವಿನ ಜಾನಿಪುರದ ನಿವಾಸಿ ಎಂದು ತಿಳಿದು ಬಂದಿದೆ. 'ಕೆಲ ವೈಯಕ್ತಿಕ ಸಮಸ್ಯೆಗಳಿಂದಾಗಿ ತನ್ನ ಜೀವನವನ್ನು ಅಂತ್ಯಗೊಳಿಸುವುದಾಗಿ' ಜೋಹರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಂಬಂಧಿಕರೊಬ್ಬರು ಪೊಲೀಸರಿಗೆ ನೀಡಿದ್ದರು.
ಈ ಮಾಹಿತಿ ಮೇರೆಗೆ ಪೊಲೀಸರು ಜಾನಿಪುರ ಪ್ರದೇಶದಲ್ಲಿರುವ ಜೋಹರ್ ಮನೆಗೆ ಭೇಟಿ ನೀಡಿದ್ದಾರೆ. ಆಗ ಮನೆಯ ಬೀಗ ಹಾಕಲಾಗಿತ್ತು. ಹೀಗಾಗಿ ಪೊಲೀಸರು ಬೀಗ ಹೊಡೆದು ಮನೆಗೆ ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಸುಮೇಧಾ ಬಿದ್ದಿದ್ದರು. ಮತ್ತೊಂದೆಡೆ, ಜೋಹರ್ ಕೂಡ ಹೊಟ್ಟೆಗೆ ಚಾಕು ಇರಿದುಕೊಂಡ ಸ್ಥಿತಿಯಲ್ಲಿ ಬಿದ್ದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಾದ ಬಳಿಕ ತಕ್ಷಣವೇ ಪೊಲೀಸರು, ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಸುಮೇಧಾ ತೀವ್ರವಾದ ಚಾಕು ಇರಿತದಿಂದ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕೊಲೆ ಆರೋಪಿಯಾದ ಗಾಯಾಳು ಜೋಹರ್ನನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರು ದಂತ ವೈದ್ಯಕೀಯ ಪದವೀಧರರು: ಸಂತ್ರಸ್ತೆ ಸುಮೇಧಾ ಮತ್ತು ಆರೋಪಿ ಜೋಹರ್ ಜಮ್ಮುವಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಕೋರ್ಸ್ ಪೂರೈಸಿದ್ದಾರೆ. ಇಬ್ಬರ ನಡುವೆ ಮೊದಲಿನಿಂದ ಸಂಬಂಧ ಇತ್ತು. ಬಿಡಿಎಸ್ ನಂತರ ಸುಮೇಧಾ ದಂತ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಮಾಡಲು ದೆಹಲಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಹೋಳಿ ಹಬ್ಬದ ನಿಮಿತ್ತ ಮಾರ್ಚ್ 7ರಂದು ಸುಮೇಧಾ ಜಮ್ಮುನಲ್ಲಿರುವ ಮನೆಗೆ ಬಂದಿದ್ದರು. ಇದಾದ ನಂತರ ಗೆಳೆಯ ಜೋಹರ್ನ ಮನೆಯಲ್ಲಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದಾರೆ. ಇದೇ ವೇಳೆ, ಕೋಪದಲ್ಲಿ ಆರೋಪಿ ಜೋಹರ್ ಗೆಳತಿ ಸುಮೇಧಾಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಅದೇ ಚಾಕುವಿನಿಂದ ತಾನು ಕೂಡ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ, ಸುಮೇಧಾ ಹಾಗೂ ಜೋಹರ್ ಬಾಲ್ಯದಿಂದಲೇ ಪರಿಚಿತರಾಗಿದ್ದರು. ಆದರೆ, ಈ ಕೊಲೆಗೆ ನಿಖರ ಕಾರಣವೇನು ಎಂಬುವುದು ಇನ್ನೂ ಗೊತ್ತಾಗಿಲ್ಲ. ಸದ್ಯ ಆರೋಪಿ ಐಸಿಯುನಲ್ಲಿ ದಾಖಲಾಗಿದ್ದು, ಸುಮೇಧಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಡೀ ಘಟನೆ ಕುರಿತು ಜಾನಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಅತ್ಯಾಚಾರ ಎಸಗಿದಾಗ ಮುಚ್ಚಿ ಹಾಕಿಸಿದ್ರು: ತಿಂಗಳಲ್ಲಿ ಎರಡನೇ ಸಲ ಕೃತ್ಯ ಎಸಗಿದ ಬಾಲಕ!?