ಮುಂಬೈ: ಮಹಿಳೆಯೊಬ್ಬಳಿಗೆ ಮೇಕೆ ಗುದ್ದಿ ಗಂಭೀರ ಗಾಯಗೊಳಿಸಿದ ಪ್ರಕರಣದಲ್ಲಿ ಜೈಲುಪಾಲಾಗಿದ್ದ ವ್ಯಕ್ತಿ 4 ವರ್ಷಗಳ ಬಳಿಕ ಬಿಡುಗಡೆಯಾಗಿದ್ದಾನೆ. ಗುದ್ದಿದ ಮೇಕೆಯ ವಿರುದ್ಧ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಆರೋಪಿಯನ್ನು ಮುಂಬೈ ನ್ಯಾಯಾಲಯ ಖುಲಾಸೆ ಮಾಡಿದೆ.
ಮುಂಬೈನಲ್ಲಿ 2018 ರಲ್ಲಿ ಈ ಘಟನೆ ನಡೆದಿತ್ತು. ಮಹಿಳೆ ಮೇಲ್ಮಹಡಿ ಹತ್ತುವಾಗ ಹಿಂದಿನಿಂದ ಮೇಕೆ ಗುದ್ದಿತ್ತು. ಈ ಮೇಕೆ ಅದೇ ಕಟ್ಟಡದ ಮೊಹಮ್ಮದ್ ಅಯೂಬ್ ಎಂಬುವರಿಗೆ ಸೇರಿದ್ದು ಎಂದು ಮಹಿಳೆ, ಈ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಮೊಹಮದ್ ಅಯೂಬ್ನನ್ನು ಪ್ರಾಣಿಗಳ ಕಾನೂನಿನಡಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಇದರ ವಿರುದ್ಧ ಆರೋಪಿ ಕುಟುಂಬಸ್ಥರು ಮೇಲ್ಮನವಿ ದಾಖಲಿಸಿದ್ದರು. ಮಹಿಳೆಗೆ ಗುದ್ದಿದ ಮೇಕೆ ತಮ್ಮದಲ್ಲ ಎಂದು ವಾದ ಮಂಡಿಸಿದ್ದರು.
4 ವರ್ಷಗಳ ಬಳಿಕ ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪ್ರಕರಣದಲ್ಲಿ ಮಹಿಳೆಯನ್ನು ಯಾರ ಮೇಕೆ ಗಾಯಗೊಳಿಸಿದೆ ಎಂಬುದು ಸಾಬೀತುಪಡಿಸಲು ಪೊಲೀಸರಿಗೆ ಸಾಧ್ಯವಾಗದ ಕಾರಣ, ನಾಲ್ಕು ವರ್ಷಗಳ ನಂತರ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು.
ಏನಿದು ಮೇಕೆ ಗುದ್ದಿದ ಪ್ರಕರಣ: ಮಹಿಳೆಯೊಬ್ಬರು ಮೊದಲ ಮಹಡಿಯಲ್ಲಿ ನಡೆದುಕೊಂಡು ಹೋಗುವಾಗ ಅಲ್ಲಿದ್ದ ಮೇಕೆ ಆಕೆಯನ್ನು ಗುದ್ದಿದಾಗ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಪ್ರಾಣಿಗಳನ್ನು ನಿರ್ಲಕ್ಷ್ಯವಾಗಿ ಸಾಕಿದ ಹಿನ್ನೆಲೆಯಲ್ಲಿ ಮಹಿಳೆ ಅದರ ಮಾಲೀಕರೆಂದು ಪರಿಗಣಿಸಿ ಮೊಹಮದ್ ಆಯೂಬ್ ವಿರುದ್ಧ ದೂರು ದಾಖಲಿಸಿದ್ದರು.
ಮೇಕೆ ಅಯೂಬ್ ಎಂಬುವವರಿಗೆ ಸೇರಿದ್ದರಿಂದ ತನಗಾದ ಗಂಭೀರ ಗಾಯಗಳಿಗೆ ಅವರೇ ಹೊಣೆ ಎಂದು ಮಹಿಳೆ ಆರೋಪಿಸಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ವಿವಾದಿತ ಮೇಕೆ ಆರೋಪಿಗೆ ಸೇರಿದ್ದು ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಲು ಸೂಚಿಸಿತ್ತು.
ಗಾಯಾಳು ಮಹಿಳೆಯ ಮೌಖಿಕ ಸಾಕ್ಷ್ಯವನ್ನು ಹೊರತುಪಡಿಸಿ ಆರೋಪವನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ನ್ಯಾಯಾಲಯಕ್ಕೆ ನೀಡಲಾಗಿಲ್ಲ. ಅಲ್ಲದೇ, ತನ್ನ ವಿರುದ್ಧ ಎಫ್‌ಐಆರ್ ಅನ್ನು ವಿಳಂಬವಾಗಿ ದಾಖಲಿಸಲಾಗಿದೆ. ಅಷ್ಟಕ್ಕೂ ಮೇಕೆ ತನ್ನದಲ್ಲ ಎಂದು ವಾದಿಸಿದ್ದ.
"ತನಗೂ ಈ ಮೇಕೆಗೂ ಸಂಬಂಧವಿಲ್ಲ ಎಂದು ಆರೋಪಿ ಸಮರ್ಥಿಸಿಕೊಂಡಿದ್ದಾನೆ. ದೂರುದಾರೆ ಇದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯ ನೀಡಿಲ್ಲ. ಮೇಕೆಯ ಕೃತ್ಯಕ್ಕೆ ಅಯೂಬ್ನನ್ನು ಅಪರಾಧಿಯನ್ನಾಗಿ ಪರಿಗಣಿಸಲಾಗದು. ತನಿಖಾಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಬಲವಾದ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ. ಹೀಗಾಗಿ ಪ್ರಕರಣವನ್ನು ಇತ್ಯರ್ಥ ಮಾಡಿ ಆರೋಪಿಯನ್ನು ಬಿಡುಗಡೆ ಮಾಡಬೇಕು" ಎಂದು ಕೋರ್ಟ್ ಆದೇಶ ನೀಡಿತು.
ಓದಿ: 11ನೇ ಮಹಡಿಯಿಂದ ಜಿಗಿದ ಸಹೋದರಿಯರು.. ಒಬ್ಬಳ ದುರ್ಮರಣ ಇನ್ನೊಬ್ಬಳ ಸ್ಥಿತಿ ಗಂಭೀರ