ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದು, ಇದರ ಬೆನ್ನಲ್ಲೇ ಪಶ್ಚಿಮ ದೆಹಲಿಯ ಜಫ್ಫಾರ್ಪುರ ಕಲಾನ್ ಪ್ರದೇಶದಲ್ಲಿ 27 ವರ್ಷದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 20 ಅಕ್ರಮ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಿವಾಸಿಯಾದ ಮುಫೀದ್ ಎಂಬಾತ ಬಂಧಿತ ಆರೋಪಿಯಾಗಿದ್ದು, ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಅಕ್ರಮ ಬಂದೂಕುಗಳನ್ನು ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.
ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಾಮಾನ್ಯ ಬಲೂನ್ ಮಾರಾಟಗಾರನ ವೇಷದಲ್ಲಿ ಈತ ಸಿಕ್ಕಿಬಿದ್ದಿದ್ದು, ಪೊಲೀಸರನ್ನು ಕಂಡೊಡನೆ ಪರಾರಿಯಾಗಲು ಪ್ರಯತ್ನಿಸಿದನು. ನಂತರ ಬ್ಯಾಗ್ನಿಂದ ಪಿಸ್ತೂಲ್ ಅನ್ನು ಹೊರತೆಗೆದು ಪೊಲೀಸರಿಗೆ ಬೆದರಿಸಲು ಪ್ರಯತ್ನಿಸಿದ್ದಾನೆ.
ಉಪ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಮೀನಾ ಅವರು ವ್ಯಕ್ತಿಯನ್ನು ನಿಯಂತ್ರಿಸಿದ್ದು, ಆರೋಪಿಯ ಚೀಲವನ್ನು ಪರಿಶೀಲನೆ ನಡೆಸಿದಾಗ 19 ಪಿಸ್ತೂಲ್ಗಳು ಪತ್ತೆಯಾಗಿವೆ. ಇದರ ಜೊತೆಗೆ 9 ಬಲೂನ್ಗಳ ಪಾಕೆಟ್ಗಳೂ ದೊರಕಿವೆ.
ಇದನ್ನೂ ಓದಿ: ರಾಜ್ಯದ ರೈತರ ಮಕ್ಕಳ ಶಿಷ್ಯವೇತನ ಯೋಜನೆ ರೂಪುರೇಷೆ, ಷರತ್ತುಗಳು ಹೀಗಿವೆ