ನವದೆಹಲಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೆಸರಿನಲ್ಲಿ ಜನರು ಮತ್ತು ಅಧಿಕಾರಿಗಳಿಗೆ ವಂಚಿಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಇಟಲಿಯಲ್ಲಿ ಬಂಧಿಸಲಾಗಿದೆ. ವಾಟ್ಸ್ಆ್ಯಪ್ ಮೂಲಕ ಅಧಿಕಾರಿಗಳಿಗೆ ಸಂದೇಶ ಕಳುಹಿಸಿ ತನ್ನ ಕೆಲಸ ಮಾಡಲು ಸೂಚಿಸುತ್ತಿದ್ದ. ಇದಕ್ಕೆ ನೆರವು ನೀಡಿದ ಇನ್ನೊಬ್ಬನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಮ್ಮು ಕಾಶ್ಮೀರದ ಮೂಲದವನಾದ ಗಗನ್ದೀಪ್ ಸಿಂಗ್ ಬಂಧಿತ ಆರೋಪಿ. 2007 ರಿಂದ ಈತ ಇಟಲಿಯ ಅಫನೆಂಗೋದಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾನೆ. ಈತ ಭಾರತದಲ್ಲಿ 9 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದ. ಬಳಿಕ ಇಟಲಿಗೆ ತೆರಳಿ 12 ನೇ ತರಗತಿ ಓದಿದ್ದ. ಅಲ್ಲಿಯೇ ಕಂಪನಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ.
ಯೂಟ್ಯೂಬ್ ನೋಡಿ ವಂಚನೆಗೆ ಸ್ಕೆಚ್: ಆರೋಪಿ ಗಗನ್ದೀಪ್ ಸಿಂಗ್ ವಂಚಿಸುವುದನ್ನು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಕಲಿತಿದ್ದ. ಅಲ್ಲಿರುವಂತೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಡಿಪಿ ಫೋಟೋ ಇರುವ ನಕಲಿ ವಾಟ್ಸ್ಆ್ಯಪ್ ಸಂಖ್ಯೆಯ ಮೂಲಕ ಜನರಿಗೆ ಮತ್ತು ಅಧಿಕಾರಿಗಳಿಗೆ ಸಂದೇಶ ಕಳುಹಿಸುತ್ತಿದ್ದ. ಅಧಿಕಾರಿಗಳಿಗೆ ತನಗೆ ಬೇಕಾದಂತೆ ನಡೆದುಕೊಳ್ಳಲು ಸೂಚಿಸುತ್ತಿದ್ದ. ಇದೇ ರೀತಿ ಕೆಲ ಜನರಿಗೂ ಸಂದೇಶ ಕಳುಹಿಸಿ ನೆರವು ಕೋರಿದ್ದನಂತೆ.
ನಕಲಿ ಖಾತೆಗೆ ಒಟಿಪಿ ನೀಡಿದ ಮತ್ತೊಬ್ಬ ಸೆರೆ: ಇಟಲಿಯಲ್ಲಿರುವ ಈತ ಭಾರತೀಯ ಸಂಖ್ಯೆಯನ್ನು ಬಳಸಿಕೊಂಡು ವಂಚಿಸಲು ಇಲ್ಲಿದ್ದ ಅಶ್ವನಿಕುಮಾರ್ ಎಂಬಾತನಿಂದ ಸಂಪರ್ಕ ಸಂಖ್ಯೆ ಮತ್ತು ವಾಟ್ಸ್ಆ್ಯಪ್ ಖಾತೆ ತೆರೆದಿದ್ದ. ಇದಕ್ಕೆ ಅಶ್ವನಿಕುಮಾರ್ ಒಟಿಪಿಯನ್ನು ನೀಡಿದ್ದ. ಅಧಿಕಾರಿಗಳಿಗೆ ಉಪರಾಷ್ಟ್ರಪತಿಯಿಂದ ನೇರವಾಗಿ ಸಂದೇಶ ಬಂದಿದ್ದು, ಅನುಮಾನ ಮೂಡಿಸಿದೆ. ಬಳಿಕ ಇದನ್ನು ಪರಿಶೀಲನೆ ನಡೆಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಇದೇ ರೀತಿ ಸಂದೇಶ ಬೇರೆಯವರಿಗೂ ಬಂದಿದ್ದ ಬಗ್ಗೆ ದೂರು ಕೂಡ ಬಂದಿತ್ತು.
ನಕಲಿ ವಾಟ್ಸ್ಆ್ಯಪ್ ಸಂಖ್ಯೆಯ ಬಗ್ಗೆ ಕಂಪನಿಯಿಂದಲೇ ಮಾಹಿತಿ ಸಂಗ್ರಹಿಸಿದಾಗ ಅದು ಇಟಲಿಯಿಂದ ಬಳಕೆ ಮಾಡುತ್ತಿರುವ ಬಗ್ಗೆ ಗೊತ್ತಾಗಿದೆ. ನಂಬರ್ ಟ್ರೇಸ್ ಮಾಡಿ ಆರೋಪಿ ಗಗನ್ದೀಪ್ ಸಿಂಗ್ನನ್ನು ಬಂಧಿಸಲಾಗಿದೆ. ಬಳಿಕ ಈತನಿಗೆ ನೆರವು ನೀಡಿದ ಅಶ್ವನಿಕುಮಾರ್ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿಯೂ ಅರಬ್ ಅಧಿಕಾರಿ ಸೋಗಲ್ಲಿ ನಡೆದಿತ್ತು ಹೋಟೆಲ್ಗೆ ವಂಚನೆ: ಕೆಲ ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿಯ ಸೋಗಿನಲ್ಲಿ ದೆಹಲಿಯ ಪಂಚತಾರಾ ಹೋಟೆಲ್ಗೆ 23 ಲಕ್ಷ ರೂಪಾಯಿ ವಂಚಿಸಿದ ಕರ್ನಾಟಕದ ಉಡುಪಿ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಈತ ದೆಹಲಿಯ ಪಂಚತಾರಾ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ 4 ತಿಂಗಳು ಉಳಿದುಕೊಂಡು ಹಣ ಪಾವತಿಸದೇ ಪರಾರಿಯಾಗಿದ್ದ.
ನಕಲಿ ವ್ಯಾಪಾರ ಕಾರ್ಡ್ ಬಳಸಿ ಕಳೆದ ವರ್ಷ 3 ತಿಂಗಳು ಕಾಲ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದ ಈತ, ಬಳಿಕ ಅಲ್ಲಿನ ಬೆಲೆಬಾಳುವ ವಸ್ತುಗಳೊಂದಿಗೆ ಕಾಣೆಯಾಗಿದ್ದ. ಇದರ ವಿರುದ್ಧ ಲೀಲಾ ಪ್ಯಾಲೇಸ್ ಹೋಟೆಲ್ ಮ್ಯಾನೇಜರ್ ದೂರು ನೀಡಿದ್ದರು. ಬಳಿಕ ತನಿಕೆ ನಡೆಸಿದ ಪೊಲೀಸರು ವಂಚಕನನ್ನು ಕರ್ನಾಟಕದ ಉಡುಪಿಯಲ್ಲಿ ಬಂಧಿಸಿದ್ದರು.
ಲೀಲಾ ಪ್ಯಾಲೇಸ್‌ನಲ್ಲಿ ಬಂಧಿತ ಆರೋಪಿ ಮೊಹಮದ್ ಷರೀಫ್ ತನ್ನನ್ನು ಅರಬ್ ಸರ್ಕಾರದ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ. ಇದಕ್ಕಾಗಿ ನಕಲಿ ಬ್ಯುಸಿನೆಸ್ ಕಾರ್ಡ್ ಅನ್ನು ಅಲ್ಲಿನ ಸಿಬ್ಬಂದಿಗೆ ತೋರಿಸಿದ್ದ. ಅರಬ್ ವೇಷಭೂಷಣದಲ್ಲಿದ್ದ ವ್ಯಕ್ತಿಯನ್ನು ಅಧಿಕಾರಿ ಎಂದು ಹೋಟೆಲ್ ಸಿಬ್ಬಂದಿ ನಂಬಿ, ಐಷಾರಾಮಿ ಕೊಠಡಿಯನ್ನು ನೀಡಿದ್ದರು.
3 ತಿಂಗಳು ಹೋಟೆಲ್ನಲ್ಲೇ ತಂಗಿದ್ದ ವಂಚಕ ಯಾರಿಗೂ ಅನುಮಾನ ಬಾರದಂತೆ ವರ್ತಿಸಿದ್ದ. ಬಳಿಕ ಹೋಟೆಲ್ನಲ್ಲಿದ್ದ ಬೆಲೆಬಾಳುವ ವಸ್ತುಗಳ ಸಮೇತ ಪರಾರಿಯಾಗಿದ್ದ. ಈ ಅವಧಿಯಲ್ಲಿ ಹೋಟೆಲ್ಗೆ ತಂಗಿದ್ದ ವೆಚ್ಚವಾಗಿ 23.46 ಲಕ್ಷ ರೂಪಾಯಿ ಪಾವತಿಸಬೇಕಿತ್ತು.
ಓದಿ: ಅರಬ್ ಅಧಿಕಾರಿ ಸೋಗಲ್ಲಿ ಹೋಟೆಲ್ಗೆ 23 ಲಕ್ಷ ರೂಪಾಯಿ ವಂಚಿಸಿದ ಕರ್ನಾಟಕದ ವ್ಯಕ್ತಿ ಸೆರೆ