ಧಾರ್(ಮಧ್ಯಪ್ರದೇಶ): ನಿಜವಾದ ಪ್ರೀತಿಗೆ ಯಾವುದೇ ಮಿತಿಯಿಲ್ಲ. ನೀವು ಸಾವಿರಾರು ಕಿಲೋ ಮೀಟರ್ ದೂರದಲ್ಲಿದ್ದರೂ ಅಥವಾ ವಿಭಿನ್ನ ಸಂಸ್ಕೃತಿಯಿಂದ ಬಂದವರಾಗಿದ್ದರೂ ಪರವಾಗಿಲ್ಲ. ಆ ಪ್ರೀತಿ ನಿಜವಾಗಿದ್ದಲ್ಲಿ ಅದು ನಿಮ್ಮನ್ನರಸಿ ಬರುತ್ತದೆ. ಇದಕ್ಕೊಂದು ನಿದರ್ಶನವೆಂಬಂತೆ ಮಧ್ಯಪ್ರದೇಶದಲ್ಲಿ ಇತ್ತೀಚೆಗಷ್ಟೇ ವಿಶಿಷ್ಟ ಮದುವೆಯೊಂದು ನಡೆದಿದೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್ ನಿವಾಸಿ ಆಶ್ ಹಾನ್ಸ್ಚೈಲ್ಡ್ ಎಂಬುವರು ತಮ್ಮ ಪ್ರೇಯಸಿಯನ್ನು ಮದುವೆಯಾಗಲೆಂದು ಇಡೀ ಕುಟುಂಬದೊಂದಿಗೆ 10,000 ಕಿಲೋ ಮೀಟರ್ ಪ್ರಯಾಣಿಸಿ ಮಧ್ಯಪ್ರದೇಶ ತಲುಪಿದ್ದಾನೆ. ಬಳಿಕ ರಾಜ್ಯದ ಮನವಾರ್ ನಿವಾಸಿ ತಬಸ್ಸುಮ್ ಹುಸೇನ್ಳೊಂದಿಗೆ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರಿಬ್ಬರ ಸುಂದರ ಪ್ರೇಮಕಥೆ ನಿಮಗಾಗಿ: ತಬಸ್ಸುಮ್ ಮಧ್ಯಮ ವರ್ಗದ ಕುಟುಂಬದವರಾಗಿದ್ದು, ಮನವಾರದ ಪಟೇಲ್ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಆಕೆಯ ತಂದೆ ಸಾದಿಕ್ ಹುಸೇನ್ ಸಣ್ಣ ಸೈಕಲ್ ರಿಪೇರಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. 2016ರಲ್ಲಿ ತಬಸ್ಸುಮ್ ಉನ್ನತ ಶಿಕ್ಷಣಕ್ಕೆಂದೇ ಸರ್ಕಾರವು ರೂಪಾಯಿ 45 ಲಕ್ಷ ಅನುದಾನವನ್ನು ನೀಡಿತ್ತು. ಅದರನ್ವಯ ಆಕೆ 2017 ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿನ ಕಾಲೇಜಿನಲ್ಲಿ ಓದುತ್ತಿರುವಾಗ ಸೀನಿಯರ್ ಆಶ್ ಹಾನ್ಸ್ಚೈಲ್ಡ್ ಎಂಬಾತ ಯುವತಿಗೆ ಪರಿಚಯವಾಗಿದ್ದರು. ಬಳಿಕ ಅವರಿಬ್ಬರ ಸ್ನೇಹ ಪ್ರೀತಿ ಎಂಬ ಸುಂದರ ಪ್ರಪಂಚಕ್ಕೆ ಮುನ್ನುಡಿ ಇಟ್ಟಿತ್ತು.
ಆದರೆ ತಬಸ್ಸುಮ್ಗೆ ತನ್ನ ತಾಯಿ ಮದುವೆಗೆ ಒಪ್ಪುತ್ತಾರೆಂದು ನಂಬಿಕೆಯಿರಲಿಲ್ಲ. ಎಲ್ಲಿ ತನ್ನ ಪ್ರೀತಿ ತನಗೆ ಸಿಗುವುದಿಲ್ಲವೋ ಎಂದು ಭಯಗೊಂಡಿದ್ದಳು. ಆದರೆ ಆಕೆಯ ತಾಯಿಗೆ ಆಶ್ ಬಗ್ಗೆ ತಿಳಿದಿದ್ದೇ ಖುಷಿಯಿಂದ ಒಪ್ಪಿಕೊಂಡರು. ಜೊತೆಗೆ ಮನೆಯವರು ಕೂಡ ಸಮ್ಮತಿಯನ್ನಿತ್ತರು. ಬಳಿಕ ಇವರಿಬ್ಬರು ಅಗಸ್ಟ್ 2 ರಂದು ಆಸ್ಟ್ರೇಲಿಯಾದಲ್ಲೇ ಕಾನೂನು ಬದ್ಧವಾಗಿ ಮದುವೆಯಾದರು.
ಆಶ್ ಕುಟುಂಬ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಲ್ಲಿನ ಆತಿಥ್ಯ, ಆಹಾರ ಪದ್ಧತಿ, ಸಂಪ್ರದಾಯಕ್ಕೆ ಮನಸೋತಿದ್ದರು. ಹೀಗಾಗಿಯೇ ಸಂಪೂರ್ಣವಾಗಿ ಸಾಂಪ್ರದಾಯಿಕ ವಿವಾಹವನ್ನು ಭಾರತದಲ್ಲೇ ನಡೆಸಲು ನಿರ್ಧರಿಸಿದರು. ಅದರಂತೆ ಇವರಿಬ್ಬರ ಪ್ರೇಮಪಯಣ ಮದುವೆ ಎಂಬ ಸುಂದರ ಕ್ಷಣಕ್ಕೆ ಸಾಕ್ಷಿಯಾಯಿತು.
ಇದನ್ನೂ ಓದಿ:ರಾಮೋಜಿ ಫಿಲ್ಮ್ಸಿಟಿಗೆ ಮತ್ತೊಂದು ಗರಿಮೆ; ಎಫ್ಎಸ್ಎಸ್ಎಐಯಿಂದ 'ಈಟ್ ರೈಟ್ ಕ್ಯಾಂಪಸ್' ಪ್ರಮಾಣಪತ್ರ