ರಾಂಪುರ (ಉತ್ತರ ಪ್ರದೇಶ): ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ಬೆಂಬಲಿಸಿ ಸಂಭ್ರಮಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗು ಅತ್ತೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ಅ.24 ರಂದು ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೋತಿತ್ತು. ಇದರಿಂದ ಉತ್ತೇಜಿತರಾದ ರಾಮ್ಗಂಜ್ನ ಇಶಾನ್ ಮಿಯಾನ್ ಅವರ ಪತ್ನಿ ರಬಿಯಾ ಅವರು ಪಾಕಿಸ್ತಾನ ಬೆಂಬಲಿಸಿ ಸ್ಟೇಟಸ್ ಹಾಕಿದ್ದರು. ಅಲ್ಲದೇ ಪಂದ್ಯದ ನಂತರ ಪಾಕಿಸ್ತಾನದ ವಿಜಯೋತ್ಸವವನ್ನು ಆಚರಿಸಿ ಭಾರತೀಯ ಕ್ರಿಕೆಟಿಗರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಇಶಾನ್ ಮಿಯಾನ್ ತನ್ನ ಪತ್ನಿ ಮತ್ತು ಅತ್ತೆಯ ವಿರುದ್ಧ ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೆಹಲಿಯ ಕಾರ್ಖಾನೆಯೊಂದರಲ್ಲಿ ತನ್ನ ಸ್ನೇಹಿತರೊಂದಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದೆ. ಆಗ ನನ್ನ ಪತ್ನಿ ಪಾಕಿಸ್ತಾನ ಪರ ವಿಜಯೋತ್ಸವ ಆಚರಿಸಿ, ಭಾರತವನ್ನು ಅವಮಾನಿಸಿದರು. ಇದರಿಂದಾಗಿ, ಕಾರ್ಖಾನೆಯ ಜನರು ನನ್ನನ್ನು ಅನುಮಾನಾಸ್ಪದವಾಗಿ ನೋಡಲಾರಂಭಿಸಿದರು. ಇದರಿಂದ ನಾನು ತುಂಬಾ ಅವಮಾನಿತನಾಗಿದ್ದೇನೆ ಎಂದು ಇಶಾನ್ ಮಿಯಾನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ಅವರ ಪತ್ನಿ ಮತ್ತು ಅತ್ತೆ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಗೇಲಿ ಮಾಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ವಿಜಯವನ್ನು ಆಚರಿಸುವ ವಾಟ್ಸ್ ಆ್ಯಪ್ ಸ್ಟೇಟಸ್ ಕುರಿತು ಇಶಾನ್, ರಬಿಯಾ ವಿರುದ್ಧ FIR ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಸಂಸಾರ್ ಸಿಂಗ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 153-ಎ ಮತ್ತು ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯ್ದೆ, 2008 ರ ಸೆಕ್ಷನ್ 67 ರ ಅಡಿಯಲ್ಲಿ ರಾಬಿಯಾ ವಿರುದ್ಧ ರಾಂಪುರ ಜಿಲ್ಲೆಯ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂಸಾರ್ ಸಿಂಗ್ ತಿಳಿಸಿದ್ದಾರೆ.
ಅ. 24ರಂದು ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ವಿಜಯವನ್ನು ಆಚರಿಸಿದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಆಗ್ರಾ ಪೊಲೀಸರು ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅರ್ಷದ್ ಯೂಸಫ್, ಸಿವಿಲ್ ಎಂಜಿನಿಯರಿಂಗ್‌ನ ತೃತೀಯ ವರ್ಷದ ವಿದ್ಯಾರ್ಥಿ ಇನಾಯತ್ ಅಲ್ತಾಫ್ ಮತ್ತು ನಾಲ್ಕನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಶೌಕತ್ ಅಹ್ಮದ್ ಘಾನೈ ಎಂದು ಗುರುತಿಸಲಾಗಿದೆ.
ಸೆಕ್ಷನ್ 153 (ಎ) (ಅಸಮಾಧಾನವನ್ನು ಉತ್ತೇಜಿಸುವುದು) ಮತ್ತು 505 (ವದಂತಿ ಅಥವಾ ಆತಂಕಕಾರಿ ಸುದ್ದಿಗಳನ್ನು ಒಳಗೊಂಡ ಹೇಳಿಕೆ ಅಥವಾ ವರದಿಯನ್ನು ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದು) ಅಡಿಯಲ್ಲಿ ಈ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.