ಮೊರದಾಬಾದ್(ಉತ್ತರ ಪ್ರದೇಶ): ವ್ಯಕ್ತಿಯೋರ್ವ ವಿಲಕ್ಷಣ ಕಾರಣದಿಂದಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯ ಗುರುವಾರ ಸಂಜೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊಹಮದ್ ಅಸ್ಲಂ (23) ಸಾವನ್ನಪ್ಪಿದ ವ್ಯಕ್ತಿ. ಸ್ನೇಹಿತ ಫರ್ಹಾನ್ ಎಂಬಾತ ಮೊಹಮದ್ ಅಸ್ಲಂ ಗುದದ್ವಾರದೊಳಗೆ ಏರ್ಕಂಪ್ರೆಸ್ಸರ್ನಿಂದ ಗಾಳಿ ಪಂಪ್ ಮಾಡಿರುವ ಕಾರಣದಿಂದ ಅಸ್ವಸ್ಥಗೊಂಡಿದ್ದ ಮೊಹಮದ್ ಅಸ್ಲಂ ಗುರುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಘಟನೆ ಬಗ್ಗೆ ವಿವರ:
ಮೊಹಮದ್ ಅಸ್ಲಂ ಹಾಗೂ ಫರ್ಹಾನ್ ಇಬ್ಬರೂ ಕೂಡಾ ಧನುಪುರ ಎಂಬಲ್ಲಿರುವ ರಫ್ತು ಉದ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ನಂತರ, ಮನೆಗೆ ತೆರಳುವ ಮೊದಲು ಇಬ್ಬರೂ ಕೂಡಾ ಏರ್ ಕಂಪ್ರೆಸ್ಸರ್ ಬಳಸಿ ತಮ್ಮ ಬಟ್ಟೆಗಳನ್ನು ಶುಚಿಗೊಳಿಸಿಕೊಳ್ಳುತ್ತಿದ್ದರು.
ಗುರುವಾರ ಸಂಜೆ ಕೂಡಾ ಎಂದಿನಂತೆ ಬಟ್ಟೆಗಳನ್ನು ಶುಚಿಗೊಳಿಸಿಕೊಳ್ಳಲು ತೆರಳಿದ್ದಾರೆ. ಈ ವೇಳೆ ಅಸ್ಲಂನ ಗುದದ್ವಾರದೊಳಗೆ ಏರ್ಕಂಪ್ರೆಸ್ಸರ್ನಿಂದ ಫರ್ಹಾನ್ ಗಾಳಿಯನ್ನು ಪಂಪ್ ಮಾಡಿದ್ದಾನೆ. ಈ ವೇಳೆ ಅಸ್ಲಂ ಅಸ್ವಸ್ಥನಾಗಿದ್ದನು ಎಂದು ಅಸ್ಲಂ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸ್ಲಂನ ಕುಟುಂಬಸ್ಥ ರಿಜ್ವಾನ್, 'ಆತನನ್ನು ಫರ್ಹಾನ್ ಮನೆಗೆ ತಂದು ಬಿಟ್ಟಿದ್ದಾನೆ. ಅಸ್ಲಂ ಮನೆಗೆ ಬರುವಾಗಲೇ ಅಸ್ವಸ್ಥಗೊಂಡಿದ್ದನು, ಹೊಟ್ಟೆ ಉಬ್ಬಿಕೊಂಡಿತ್ತು. ಈ ಬಗ್ಗೆ ಫರ್ಹಾನ್ನನ್ನು ಕೇಳಿದಾಗ ಫ್ರಾಂಕ್ ನಡೆಸುವ ವೇಳೆ ಅಸ್ಲಂನ ಗುದದ್ವಾರದಲ್ಲಿ ಗಾಳಿಯನ್ನು ಪಂಪ್ ಮಾಡಿದ್ದಾಗಿ ಫರ್ಹಾನ್ ಹೇಳಿದ್ದನು' ಎಂದಿದ್ದಾನೆ.
ಜೊತೆಗೆ 'ಅಸ್ಲಂನನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸ್ಲಂ ಸಾವನ್ನಪ್ಪಿದ್ದಾನೆ. ನಮಗೆ ಸತ್ಯ ಗೊತ್ತಾಗಬೇಕಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಹಾಗೂ ಫರ್ಹಾನ್ ವಿರುದ್ಧ ಕ್ರಮಕ್ಕಾಗಿ ನಾವು ಪೊಲೀಸರನ್ನು ಒತ್ತಾಯಿಸಿದ್ದೇವೆ' ಎಂದು ರಿಜ್ವಾನ್ ಹೇಳಿದ್ದಾನೆ.
ಮೊರದಾಬಾದ್ ನಗರ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಆನಂದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವ್ಯಕ್ತಿಯೋರ್ವ ವಿಲಕ್ಷಣವಾಗಿ ಸಾವನ್ನಪ್ಪಿರುವ ಬಗ್ಗೆ ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಫರ್ಹಾನ್ನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದು ಆಕಸ್ಮಿಕವೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಸ್ಲಂ ಆರು ತಿಂಗಳ ಹಿಂದೆ ಮದುವೆಯಾಗಿದ್ದು, ತಾಯಿ ಮತ್ತು ಮದುವೆಯಾಗದ ಇಬ್ಬರು ಸಹೋದರಿಯರೊಂದಿಗೆ ವಾಸ ಮಾಡುತ್ತಿದ್ದನು. ಈಗ ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಸಾವಿಗೆ ನಿಖರ ಕಾರಣ ತಿಳಿದು ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ನೋಡಲು ಥೇಟ್ ದೆಹಲಿ ಸಿಎಂ ಕೇಜ್ರಿವಾಲ್ ರೀತಿ ಕಾಣುವ ಚಾಟ್ ಮಾರಾಟಗಾರ!