ಪಶ್ಚಿಮ ಗೋದಾವರಿ : ಹಲಸಿನ ಮರದಲ್ಲಿ ಹಣ್ಣುಗಳನ್ನು ಕಟ್ ಮಾಡುತ್ತಿರುವ ವೇಳೆ ಪ್ರಮಾದವಶಾತ್ ಹಲಸಿನ ಹಣ್ಣೊಂದು ವ್ಯಕ್ತಿಯ ಮುಖದ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ಪಾಲಕೊಲ್ಲು ಗ್ರಾಮದಲ್ಲಿ ನಡೆದಿದೆ. ನಾಲ್ಕೈದು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವೆಂಕಟೇಶ್ವರ್ ನಗರದ ಮಾಜಿ ಕೌನ್ಸಿಲರ್ ಮತ್ತು ವ್ಯಾಪಾರಸ್ಥರಾಗಿದ್ದ ನಾರಾಯಣ ಮೂರ್ತಿ (66) ಎಂಬುವರು ತನ್ನ ಮನೆಯಂಗಳದಲ್ಲಿರುವ ಹಲಸಿನ ಮರದಲ್ಲಿ ಹಣ್ಣುಗಳನ್ನು ಕಟ್ ಮಾಡುತ್ತಿದ್ದರು. ಈ ವೇಳೆ ಹಲಸಿನ ಹಣ್ಣೊಂದು ಮುಖದ ಮೇಲೆ ಬಿದ್ದಿದೆ. ಮುಖದ ಮೇಲೆ ಹಣ್ಣು ಬಿದ್ದ ಪರಿಣಾಮ ನಾರಾಯಣ ಮೂರ್ತಿ ಕೆಳಗೆ ಕುಸಿದು ಬಿದ್ದಿದ್ದಾರೆ.
ಸಿಮೆಂಟ್ ರಸ್ತೆಯಲ್ಲಿ ಬಿದ್ದ ಪರಿಣಾಮ ನಾರಾಯಣ ಮೂರ್ತಿ ತಲೆಗೆ ಬಲವಾಗಿ ಪೆಟ್ಟಾಗಿ ರಕ್ತಸ್ರಾವ ಆಗಿದೆ. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಭೀಮವರಂನ ಆಸ್ಪತ್ರೆಗೆ ದಾಖಲಿಸಲು ವಾಹನದಲ್ಲಿ ಹತ್ತಿಸುತ್ತಿರುವಾಗ ನಾರಾಯಣ ಮೂರ್ತಿ ಕೊನೆಯುಸಿರೆಳೆದರು. ಹೀಗೆ ಹಲಸಿನ ಹಣ್ಣು ಬಿದ್ದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ.