ಗೋರಖ್‌ಪುರ: ಬಿಹಾರದಿಂದ ಹೊರಟಿದ್ದ ಗೋರಖ್‌ಪುರ - ನರ್ಕಟಿಯಾಗಂಜ್ ಪ್ಯಾಸೆಂಜರ್ನ ಮಹಿಳಾ ಬೋಗಿಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೋರಖ್‌ಪುರ ನಿಲ್ದಾಣದಲ್ಲಿ ರೈಲು ನಿಂತ ವೇಳೆ ಈ ಘಟನೆ ನಡೆದಿದೆ. ಸೋಮವಾರ ತಡರಾತ್ರಿ, ಪ್ಲಾಟ್‌ಫಾರ್ಮ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆಯೇ ಯುವಕ ಮಹಿಳೆಯ ಬೋಗಿಯೊಂದರ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ಯಾನ್ನಲ್ಲಿ ನೇತಾಡುತ್ತಿದ್ದ ಶವ ನೋಡಿದ ಮಹಿಳೆಯರು ಕಿರುಚಿದ್ದಾರೆ. ಇದರಿಂದಾಗಿ ಕೆಲಕಾಲ ಕೋಲಾಹಲ ಉಂಟಾದ ಘಟನೆಯೂ ನಡೆದಿದೆ.
ಯುವಕ ಯಾರು, ಎಲ್ಲಿಂದ ಬಂದಿದ್ದ, ಎಲ್ಲಿಗೆ ಹೋಗುತ್ತಿದ್ದ ಎಂಬ ಬಗ್ಗೆ ರೈಲ್ವೆ ಇಲಾಖೆಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. RPF ಈ ಸಂಬಂಧ ತನಿಖೆ ಕೈಗೊಂಡಿದೆ. ಈ ಘಟನೆ ಅತ್ಯಂತ ಆಘಾತಕಾರಿಯಾಗಿದೆ. ಈ ಯುವಕ ಮಹಿಳಾ ಬೋಗಿಯೊಳಗೆ ಸೇರಿಕೊಂಡಿದ್ದು ಹೇಗೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಗೋರಖ್‌ಪುರದಿಂದ ಸಿವಾನ್ ಮೂಲಕ ನರ್ಕಟಿಯಾಗಂಜ್‌ಗೆ ಹೋಗುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ವಯಸ್ಸು ಸುಮಾರು 40 ಎಂದು ವರದಿಯಾಗಿದೆ.
ಆರ್‌ಪಿಎಫ್ ಮತ್ತು ಜಿಆರ್‌ಪಿ ಪಡೆಗಳು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿವೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಕೂಡಾ ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಬ್ಯಾಗ್ ಅಥವಾ ಯಾವುದೇ ಗುರುತಿನ ಚೀಟಿಯೂ ಪತ್ತೆಯಾಗಿಲ್ಲ, ಆದ್ದರಿಂದ ಅವರ ಗುರುತು ಕೂಡ ಆರ್‌ಪಿಎಫ್‌ಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆತ್ಮಹತ್ಯೆ ಘಟನೆಯ ನಂತರ, ರೈಲು ಸುಮಾರು ಮೂರು ಗಂಟೆಗಳ ಕಾಲ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು, ಇದರಿಂದಾಗಿ ಅಲ್ಲಿದ್ದ ಪ್ರಯಾಣಿಕರಲ್ಲಿ ಸಹ ಭೀತಿ ಆವರಿಸಿತ್ತು.
ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ರೈಲ್ವೆ ಇತಿಹಾಸದಲ್ಲಿ ಇದೇ ಮೊದಲು. ಈ ಹಿಂದೆ ಮುಂಬೈನಿಂದ ಬರುತ್ತಿದ್ದ ರೈಲಿನ ಶೌಚಾಲಯದಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ, ಆತ್ಮಹತ್ಯೆಯಂತಹ ಘಟನೆ ಆಘಾತಕಾರಿಯಾಗಿದೆ. ಪ್ರಸ್ತುತ ಘಟನೆಯಲ್ಲಿ ಸಾವಿಗೆ ಕಾರಣ ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಆರ್‌ಪಿಎಫ್ ಇನ್ಸ್ಪೆಕ್ಟರ್ ದಶರಥ್ ಪ್ರಸಾದ್ ಹೇಳಿದ್ದಾರೆ. ಪೊಲೀಸರಿಗೆ ಇನ್ನೂ ಏನೂ ಸಿಕ್ಕಿಲ್ಲ. ಘಟನೆಯ ನಂತರ ಮಹಿಳಾ ಬೋಗಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ರೈಲಿನ ಬೋಗಿಯಲ್ಲಿ ಯುವಕನ ಶವ ಪತ್ತೆಯಾಗಿದೆ ಎಂದು ಜಿಆರ್ ಪಿ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಮೌರ್ಯ ತಿಳಿಸಿದ್ದಾರೆ. ಅವರ ಜೊತೆ ಪರಿಚಿತರು ಅಥವಾ ಕುಟುಂಬದವರು ಯಾರೂ ಇರಲಿಲ್ಲ. ಹೀಗಾಗಿ ಆತನನ್ನು ಗುರುತಿಸುವುದು ಕಷ್ಟವಾಗಿದೆ. ಯುವಕನಿಂದ ಯಾವುದೇ ಪ್ಲಾಟ್‌ಫಾರ್ಮ್ ಅಥವಾ ರೈಲು ಟಿಕೆಟ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ಆರ್‌ಪಿಎಫ್‌ನ ಹಿರಿಯ ಕಮಾಂಡೆಂಟ್ ಮದನ್ ಮೋಹನ್ ಮಿಶ್ರಾ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಇದನ್ನು ಓದಿ: ಮಣಿಪುರದಲ್ಲಿ ಮತ್ತೆ ಸಂಘರ್ಷ: ಬಂಡುಕೋರರ ಗುಂಡಿನ ಚಕಮಕಿಯಲ್ಲಿ 13 ಜನರ ಹತ್ಯೆ