ಒಡಿಶಾ: ಸಾಮಾನ್ಯವಾಗಿ ಹಾವುಗಳೆಂದರೆ ಎಲ್ಲರಿಗೂ ಭಯ. ಹಾವು ಕಚ್ಚಿದ್ರೆ ಅನೇಕರಿಗೆ ಜೀವಭಯವೇ ಉಂಟಾಗುತ್ತದೆ. ಆದರೆ ಇಲ್ಲೊಬ್ಬ ಬುಡಕಟ್ಟು ಜನಾಂಗದ ವ್ಯಕ್ತಿ ತನಗೆ ಕಚ್ಚಿದ ಹಾವನ್ನು ತಾನೂ ಕಚ್ಚಿ ಸಾಯಿಸಿದ್ದಾನೆ. ಈ ವಿಚಿತ್ರ ಘಟನೆ ಒಡಿಶಾದ ಜಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಂಭರಿಪತಿಯಾ ಗ್ರಾಮದ ಕಿಶೋರ್ ಬದ್ರ (45) ಎಂಬಾತ ಬುಧವಾರ ಹೊಲದಲ್ಲಿ ಕೆಲಸ ಮಾಡಿ ರಾತ್ರಿ ಮನೆಗೆ ಮರಳುತ್ತಿದ್ದ. ಈ ಸಂದರ್ಭದಲ್ಲಿ ಆತನ ಕಾಲಿಗೆ ಹಾವೊಂದು ಕಚ್ಚಿದೆ. ಇದರಿಂದಾಗಿ ಸೇಡು ತೀರಿಸಿಕೊಳ್ಳಲು ಮುಂದಾದ ಆತ, ಹಾವನ್ನು ಸೆರೆಹಿಡಿದು ಕಚ್ಚಿ ಸಾಯಿಸಿಯೇ ಬಿಟ್ಟ.
"ನಾನು ನಿನ್ನೆ ರಾತ್ರಿ ಕಾಲ್ನಡಿಗೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ನನ್ನ ಕಾಲಿಗೆ ಏನೋ ಕಚ್ಚಿತು. ಟಾರ್ಚ್ ಆನ್ ಮಾಡಿ ನೋಡಿದಾಗ ವಿಷಕಾರಿ ಹಾವು ಎಂದು ತಿಳಿಯಿತು. ಕೂಡಲೇ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಪದೇ ಪದೇ ಕಚ್ಚಿ ಸಾಯಿಸಿದೆ" ಎಂದು ಕಿಶೋರ್ ಬದ್ರ ಹೇಳಿದ್ದಾನೆ.
ಹಾವು ಕಚ್ಚಿದ ಕಾರಣ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವಂತೆ ಬದ್ರಗೆ ಸಲಹೆ ನೀಡಿದ್ದರು. ಆದರೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ ಕಿಶೋರ್, ಅದೇ ದಿನ ರಾತ್ರಿ ಸಾಂಪ್ರದಾಯಿಕ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ಅದೃಷ್ಟವಶಾತ್ ಹಾವು ಕಚ್ಚಿರುವುದು ಆತನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.