ಅಹಮದಾಬಾದ್ (ಗುಜರಾತ್): ದೇಶದಲ್ಲಿ ಧಾರ್ಮಿಕ ಕೇಂದ್ರಗಳ ಮೇಲಿನ ಧ್ವನಿವರ್ಧಕ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಓರ್ವ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿ ಭಕ್ತಿಗೀತೆಗಳ ಪ್ರಸಾರ ಮಾಡುವ ವಿಚಾರವಾಗಿ ನಡೆದು ಘಟನೆಯಲ್ಲಿ ಆರು ಜನರು ಸೇರಿಕೊಂಡು 42 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಮೆಹ್ಸಾನಾ ಜಿಲ್ಲೆಯ ಮುದರ್ದಾ ಗ್ರಾಮದಲ್ಲಿ ಮೇ 3ರಂದು ಈ ಘಟನೆ ನಡೆದಿದೆ. ಜಶ್ವಂತ್ ಠಾಕೂರ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಆರು ಜನ ಆರೋಪಿಗಳ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಠಾಕೂರ್ ಕುಟುಂಬವು ತಮ್ಮ ಮನೆಯ ಸಂಕೀರ್ಣದಲ್ಲಿ ಸಣ್ಣ ದೇವಸ್ಥಾನ ನಿರ್ಮಿಸಿದೆ. ಜಶ್ವಂತ್ ಅವರ ಅಣ್ಣ ಅಜಿತ್ ಠಾಕೂರ್ ಸಂಜೆ ಮೇ 3ರಂದು ದೀಪ ಬೆಳಗಿಸಿ ಭಕ್ತಿಗೀತೆಗಳ ಪ್ರಸಾರ ಮಾಡಿದ್ದರು. ಆದರೆ, ಇದರಿಂದ ಸದಾಜಿ ಠಾಕೂರ್ ಎಂಬುವವರು ಅಸಮಾಧಾನಗೊಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಜಯಂತಿ ಠಾಕೂರ್, ವೀನು ಠಾಕೂರ್ ಹಾಗೂ ಇತರರು ಸೇರಿಕೊಂಡು ಜಶ್ವಂತ್ ಮತ್ತು ಅಜಿತ್ ಸಹೋದರರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಇನ್ಸ್ಪೆಕ್ಟರ್ ಎಸ್.ಬಿ.ಚವ್ಡಾ ತಿಳಿಸಿದ್ದಾರೆ.
ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಶ್ವಂತ್ ಠಾಕೂರ್ನನ್ನು ಅಹಮದಾಬಾದ್ ಆಸ್ಪತ್ರೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದ. ಮತ್ತೋರ್ವ ಗಾಯಾಳು ಅಜಿತ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನರೇಗಾದಲ್ಲಿ ಅಕ್ರಮ: IAS ಅಧಿಕಾರಿಯ ಚಾರ್ಟರ್ಡ್ ಅಕೌಂಟೆಂಟ್ ಮನೆಯಲ್ಲಿ 19.31 ಕೋಟಿ ನಗದು ಜಪ್ತಿ