ಬಹ್ರೈಚ್ (ಉತ್ತರ ಪ್ರದೇಶ): ಜಮೀನಿನಿಂದ ಕಬ್ಬು ಕದ್ದಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಬಹ್ರೈಚ್ ನಿವಾಸಿಗಳಾದ ರಾಮದೇವ್ ಯಾದವ್ ಮತ್ತು ಶೌಕತ್ ಅಲಿ ಎಂದು ಗುರುತಿಸಲಾಗಿದೆ. ಪಡುಹಾ ನಿವಾಸಿ ಮುಬಾರಕ್ ಹಸನ್ ಎಂಬಾತ ನವೆಂಬರ್ 30ರಂದು ರಾತ್ರಿ ಇವರಿಬ್ಬರ ಹೊಲದಲ್ಲಿ ಕಬ್ಬು ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದನಂತೆ. ಮುಬಾರಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ರಾಮದೇವ್ ಮತ್ತು ಶೌಕತ್ ಆತನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಆತನ ತಲೆಗೆ ಹೊಡೆದಿದ್ದು, ಮುಬಾರಕ್ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಈ ವೇಳೆ ಆರೋಪಿಗಳು ಆತನನ್ನು ಬಿಟ್ಟು ಪರಾರಿಯಾಗಿದ್ದರು.
ಮರುದಿನ ಬೆಳಗ್ಗೆ ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಗಳಿಬ್ಬರನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.