ಮುಂಬೈ : ಆಸ್ತಿ ವಿವಾದದಲ್ಲಿ ನ್ಯಾಯಾಧೀಶರು ತಮ್ಮ ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆ 55 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಬಾಂಬೆ ಹೈಕೋರ್ಟ್‌ನ ನ್ಯಾಯಾಲಯದ ಕೊಠಡಿಯೊಳಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆದರೆ, ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ಸಕಾಲದಲ್ಲಿ ಅವರನ್ನು ತಡೆದಿದ್ದಾರೆ.
ತಾಯಿಯ ಆಸ್ತಿ ವಿವಾದದಲ್ಲಿ ಸಿಲುಕಿದ್ದ ವ್ಯಕ್ತಿಯ ಮನವಿಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಪಿ ಡಿ ನಾಯ್ಕ್‌ರಿದ್ದ ವಿಭಾಗೀಯ ಪೀಠ, ಹಿರಿಯ ನಾಗರಿಕರ ಕಾಯ್ದೆಯಡಿ ತನ್ನ ನಿವೇಶನವನ್ನು ಖಾಲಿ ಮಾಡುವಂತೆ ಆದೇಶಿಸಿದೆ.
ತೀರ್ಪು ಹೊರ ಬರುತ್ತಿದ್ದಂತೆ ತನ್ನ ಪ್ಯಾಂಟ್ ಜೇಬಿನಿಂದ ಪೇಪರ್ ಕಟ್ಟರ್ ಚಾಕುವನ್ನು ಹೊರತೆಗೆದ ವ್ಯಕ್ತಿ, ತನ್ನ ಮಣಿಕಟ್ಟನ್ನು ಸೀಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೇರಿದಂತೆ ಅವರ ಸುತ್ತಲಿದ್ದ ಕೆಲವು ವಕೀಲರು ಚುರುಕಾಗಿ ವರ್ತಿಸಿ ಅವರನ್ನು ಪ್ರಾಣಾಪಾಯದಿಂದ ತಡೆದಿದ್ದಾರೆ. ನ್ಯಾಯಾಲಯಕ್ಕೆ ಹಾಜರಾದ ಪೊಲೀಸ್ ಸಿಬ್ಬಂದಿ ಅವರನ್ನು ಆಜಾದ್ ಮೈದಾನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರು ವ್ಯಕ್ತಿಯ ಕುಟುಂಬ ಸದಸ್ಯರನ್ನು ಠಾಣೆಗೆ ಕರೆದು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ವೈದ್ಯಕೀಯ ನೆರವು ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಓದಿ: ಬಿಜೆಪಿಯ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ : ಕಾರ್ಯಕರ್ತರುಗಳ ಬಂಧನ