ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿವಾಸದೊಳಗೆ ಪ್ರವೇಶಿಸಲು ಯತ್ನಿಸಿದ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ. ರಾಜ್ಯ ರಾಜಧಾನಿ ಕೋಲ್ಕತ್ತಾದಲ್ಲಿರುವ ಸಿಎಂ ಮಮತಾ ಅವರ ಕಾಳಿಘಾಟ್ ನಿವಾಸದ ಮುಂದೆ ತಿರುಗಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಬಂಧಿತ ವ್ಯಕ್ತಿಯನ್ನು ಶೇಖ್ ನೂರ್ ಆಲಂ ಎಂದು ಗುರುತಿಸಲಾಗಿದೆ. ಆತನಿಂದ ಬಂದೂಕು, ಚಾಕು ಮತ್ತು ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸದ ಹೊರಗೆ ಪೊಲೀಸ್ ಸ್ಟಿಕ್ಕರ್ ಅಂಟಿಸಿದ್ದ ಕಪ್ಪು ಕಾರನ್ನು ನಿಲ್ಲಿಸಿರುವುದು ಪೊಲೀಸರು ಗಮನಿಸಿದ್ದಾರೆ. ಅಲ್ಲದೇ, ಕಾರಿನೊಳಗೆ ವ್ಯಕ್ತಿಯೊಬ್ಬರು ಕುಳಿತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸಿಎಂ ಭದ್ರತೆಯ ಉಸ್ತುವಾರಿ ವಹಿಸಿದ್ದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಅಧಿಕಾರಿಗಳು ಅನುಮಾನಗೊಂಡು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆಗ ಸಿಎಂ ನಿವಾಸದ ಹೊರಗೆ ಏಕೆ ಕಾಯುತ್ತಿದ್ದೀರಿ ಎಂಬ ಪ್ರಶ್ನೆಗೆ ಆರೋಪಿ ನೂರ್ ಆಲಂ ಸರಿಯಾದ ಉತ್ತರ ನೀಡಿಲ್ಲ. ಮುಖ್ಯಮಂತ್ರಿ ಅವರನ್ನು ಭೇಟಿಯಾಗಬೇಕು ಎಂದು ಮಾತ್ರ ತಿಳಿಸಿದ್ದಾನೆ. ಅಲ್ಲದೇ, ಈತನ ಬಳಿ ವಿವಿಧ ಏಜೆನ್ಸಿಗಳ ಹಲವಾರು ಗುರುತಿನ ಚೀಟಿಗಳು ಹಾಗೂ ಒಂದು ಬಂದೂಕು, ಒಂದು ಚಾಕು ಮತ್ತು ಡ್ರಗ್ಸ್ ಪತ್ತೆಯಾಗಿವೆ. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಮಾತನಾಡಿ, "ಸಿಎಂ ಮಮತಾ ಬ್ಯಾನರ್ಜಿ ಅವರ ನಿವಾಸದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಣಕ್ಕೆ ಶೇಖ್ ನೂರ್ ಆಲಂ ಎಂಬಾತನನ್ನು ಬಂಧಿಸಲಾಗಿದೆ. ಈ ಆರೋಪಿ ಪೊಲೀಸ್ ಸ್ಟಿಕ್ಕರ್ ಅಂಟಿಸಿದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಸದ್ಯ ಪೊಲೀಸರು, ಎಸ್‌ಟಿಎಫ್ ಮತ್ತು ವಿಶೇಷ ವಿಭಾಗವು ಸ್ಥಳೀಯ ಪೊಲೀಸ್ ಠಾಣೆಗೆ ಬಂಧಿತನನ್ನು ಕರೆತಂದು ವಿಚಾರಣೆ ನಡೆಸಿದೆ ಎಂದು ತಿಳಿಸಿದ್ದಾರೆ.
ಇಂದು ತೃಣಮೂಲ ಕಾಂಗ್ರೆಸ್‌ನ ಹುತಾತ್ಮರ ದಿನವಾಗಿದೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ದಿನವೇ ಈ ಘಟನೆ ನಡೆದಿದೆ. ಸಿಎಂ ಮಮತಾ ಭಾಷಣವನ್ನು ಕೇಳಲು ವಿವಿಧ ಜಿಲ್ಲೆಗಳು ಮತ್ತು ದೂರದ ಹಳ್ಳಿಗಳು ಮತ್ತು ಪಟ್ಟಣಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಕೋಲ್ಕತ್ತಾಕ್ಕೆ ಆಗಮಿಸಿದ್ದರು.
ಕಳೆದ ವರ್ಷ ಕೂಡ ಇದೇ ರೀತಿಯಾಗಿ ವ್ಯಕ್ತಿಯೊಬ್ಬ ಸಿಎಂ ಮಮತಾ ಬ್ಯಾನರ್ಜಿ ನಿವಾಸಕ್ಕೆ ನುಗ್ಗಿದ್ದ ಘಟನೆ ನಡೆದಿತ್ತು. 2022ರ ಜುಲೈ ತಿಂಗಳಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ ಮನೆಯ ಗೋಡೆ ಏರಿ ಒಳಗಡೆ ಹೋಗಿದ್ದ. ಅಲ್ಲದೇ, ಸಿಎಂ ನಿವಾಸದಲ್ಲೇ ರಾತ್ರಿಯಿಡೀ ನಿಶಬ್ಧವಾಗಿ ಕುಳಿತಿದ್ದ. ಬೆಳಗ್ಗೆ ಭದ್ರತಾ ಸಿಬ್ಬಂದಿ ಆತನನ್ನು ಗಮನಿಸಿ ಬಂಧಿಸಿದ್ದರು.
ಇದನ್ನೂ ಓದಿ: ತಡರಾತ್ರಿ ಸಿಎಂ ಮಮತಾ ಬ್ಯಾನರ್ಜಿ ಮನೆಯ ಗೋಡೆ ಏರಿ ಒಳ ನುಗ್ಗಿದ ವ್ಯಕ್ತಿ!